ಚಿಕ್ಕಮಗಳೂರು:ಕಾಫಿನಾಡಲ್ಲಿ ಕಳೆದು ನಾಲ್ಕೈದು ವರ್ಷಗಳಿಂದ ನಿಯಂತ್ರಣದಲ್ಲಿದ್ದ ಕೆಎಫ್ಡಿ ಸೋಂಕು ಈ ವರ್ಷ ದಿನದಿಂದ ದಿನಕ್ಕೆ ಕ್ರಮೇಣ ಏರಿಕೆಯಾಗುತ್ತಿದೆ. ಕೊಪ್ಪ ತಾಲೂಕಿನ ಒಂದೇ ಗ್ರಾಮದಲ್ಲಿ 7 ಜನರಲ್ಲಿ ಕಾಣಿಸಿಕೊಂಡಿದ್ದ ಸೋಂಕು ಇದೀಗ, ಎನ್.ಆರ್.ಪುರ ತಾಲೂಕಿನ ಮೂರು ಗ್ರಾಮಗಳಲ್ಲಿ ತಲಾ ಒಬ್ಬರಿಗೆ ಹರಡಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿಗೆ ಹೊಂದಿಕೊಂಡಿರುವ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ತಾಲೂಕುಗಳಾದ ಎನ್.ಆರ್.ಪುರ, ಶೃಂಗೇರಿಯಲ್ಲಿ ಮಂಗನ ಕಾಯಿಲೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಈ ವರ್ಷ ಮಲೆನಾಡಲ್ಲಿ ತೀವ್ರ ಮಳೆ ಅಭಾವ ಎದುರಾಗಿರುವುದರಿಂದ ಕಾಯಿಲೆ ಹೆಚ್ಚಾಗಿದೆ. ಕೊಪ್ಪ ತಾಲೂಕಿನ ಓ.ಎಲ್.ವಿ. ಎಸ್ಟೇಟ್ ಹಾಗೂ ಮೈಸೂರು ಪ್ಲಾಂಟೇಷನ್‍ನಲ್ಲಿ ಹೆಚ್ಚಾಗಿ ಈ ರೋಗ ಕಾಣಿಸಿಕೊಂಡಿದೆ.
ಸೌದೆ ತರಲು ಹೋದವರಲ್ಲಿ ಸೋಂಕು ಪತ್ತೆಯಾಗಿದೆ. ಈ ಎರಡು ಎಸ್ಟೇಟ್ ಅಕ್ಕ ಪಕ್ಕದ ಗ್ರಾಮಗಳಲ್ಲಿ ಹೆಚ್ಚಾಗಿ ಪ್ರಕರಣಗಳು ಕಾಣಿಸಿಕೊಂಡಿವೆ. ಈ ಭಾಗದಲ್ಲಿ ಮೂರು ಮಂಗಗಳು ಸಾವನ್ನಪ್ಪಿದ್ದು, ಅವುಗಳ ಮರಣೋತ್ತರ ಪರೀಕ್ಷೆ ಕೂಡ ನಡೆಸಲಾಗಿದೆ. ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆ ಈ ಬಾರಿ ಹೆಚ್ಚಾಗಿದ್ದು, ಬೇಸಿಗೆಯಲ್ಲಿ ಮತ್ತಷ್ಟು ಉಲ್ಬಣವಾಗುವ ಕುರಿತು ಜಿಲ್ಲಾಡಳಿತ ಆತಂಕ ವ್ಯಕ್ತಪಡಿಸಿದೆ. ಜೊತೆಗೆ ಕೊಪ್ಪದ ಎಸ್ಟೇಟ್‍ನಲ್ಲಿ ಕಡಿದ ಮರಗಳು ಅಲ್ಲೇ ಕೊಳೆ ತಿರುವುದು ಕೂಡ ಕಾಯಿಲೆ ಹೆಚ್ಚಾಗಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಭಾರಿ ಮಳೆಯಾದರೆ ಈ ರೋಗ ಹರಡುವ ಪ್ರಮಾಣ ತಗ್ಗಲಿದೆ ಎನ್ನವುದು ಜಿಲ್ಲಾಡಳಿತದ ನಂಬಿಕೆ.
ಸಕ್ರಿಯ ಪ್ರಕರಣಗಳು- 24:ಕಾಫಿನಾಡಿನ 3 ತಾಲೂಕಿನಲ್ಲಿ ಸದ್ಯಕ್ಕೆ 24 ಸಕ್ರಿಯ ಪ್ರಕರಣಗಳಿವೆ. ನಿತ್ಯ 3 ರಿಂದ 4 ಕೇಸ್‍ಗಳು ಹೆಚ್ಚಾಗುತ್ತಿವೆ. ಈ ಕಾಯಿಲೆಯಿಂದ ಓರ್ವ ವೃದ್ಧ ಸಾವನ್ನಪ್ಪಿದ್ದಾನೆ. ಜಿಲ್ಲಾಡಳಿತ ಕೂಡ ಮುಂಜಾಗೃತ ಕ್ರಮವಾಗಿ ಮಲೆನಾಡಿನಾದ್ಯಂತ ಹೈ ಅಲರ್ಟ್ ಘೋಷಿಸಿದ್ದು, ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಎಫ್ಡಿ ವಾರ್ಡ್ ಕೂಡ ಆರಂಭಿಸಲಾಗಿದೆ. ತಾಲೂಕು ವಿಚಕ್ಷಣಾ ಅಧಿಕಾರಿಗಳ ತಂಡ ಸುತ್ತಮುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.
ಕಾಯಿಲೆ ತಡೆಗೆ 900ಕ್ಕೂ ಅಧಿಕ ಕುಟುಂಬಗಳಿಗೆ ಎಣ್ಣೆ ವಿತರಣೆ:ಮಲೆನಾಡ ಕಾಡಂಚಿನ ಗ್ರಾಮದ ಜನರಿಗೆ ಎಣ್ಣೆ ಕೂಡ ನೀಡುತ್ತಿದ್ದಾರೆ. ಕಾಡಿಗೆ ಹೋಗುವಾಗ ಈ ಎಣ್ಣೆಯನ್ನು ಕೈ ಮತ್ತು ಕಾಲಿಗೆ ಹಚ್ಚಿಕೊಂಡು ಹೋಗುವಂತೆ ಅರಿವು ಮೂಡಿಸುತ್ತಿದ್ದಾರೆ. ಪ್ರತಿ ಮನೆಗೂ 4 ಬಾಟಲಿಯಂತೆ ಒಟ್ಟು 900 ಕ್ಕೂ ಅಧಿಕ ಕುಟುಂಬಗಳಿಗೆ ಈಗಾಗಲೇ ಎಣ್ಣೆಯನ್ನು ನೀಡಿದ್ದಾರೆ. 2,783 ಬಾಟಲಿ (ದೀಪ-30) ಎಣ್ಣೆ ಸ್ಟಾಕ್ ಇದೆ. ಮತ್ತಷ್ಟು ಬಾಟಲಿ ವಿತರಿಸುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ. ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದು, ಆರೋಗ್ಯ ಸ್ಥಿತಿ ಗಂಭೀರಗೊಂಡರೆ ಉಡುಪಿ, ಮಂಗಳೂರು, ಮಣಿಪಾಲ್, ಶಿವಮೊಗ್ಗಕ್ಕೆ ಕಳುಹಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಡಿಎಚ್ಒ ಅಶ್ವತ್ ಬಾಬು ಮಾಹಿತಿ ನೀಡಿದರು.
ಉಣ್ಣೆ ಕಡಿತದಿಂದ ರೋಗ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಮಂಗನ ಕಾಯಿಲೆ ಮಲೆನಾಡಿಗರ ನಿದ್ದೆಗೆಡಿಸಿದೆ.
ಇದನ್ನೂ ಓದಿ:ಕಣ್ಣೆದುರೇ ಪುತ್ರನ ಸಾವು, ಅನಾಥವಾದ ಹೆತ್ತಮ್ಮ; ಅಂತ್ಯಕ್ರಿಯೆ ಮಾಡಿ ಮಾನವೀಯತೆ ಮೆರೆದ ಯಂಗ್ ಬೆಲಗಾಮ್ ಫೌಂಡೇಶನ್