ಬೆಂಗಳೂರು:ನಕಲಿ ಇ-ಬ್ಯಾಂಕ್ ಗ್ಯಾರಂಟಿಗಳನ್ನು ನೀಡಿ ವಂಚಿಸುತ್ತಿದ್ದ ಆರೋಪದಡಿ ನೋಯ್ಡಾ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಒಬ್ಬನನ್ನು ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಆಶಿಶ್ ರಾಯ್ ಅಲಿಯಾಸ್ ಆಶಿಶ್ ಸಕ್ಸೇನಾ (45) ಬಂಧಿತ ಆರೋಪಿ.
ಆರೋಪಿತನ ಪತ್ತೆಗಾಗಿ ಫೆಬ್ರವರಿಯಲ್ಲಿ ಬೆಂಗಳೂರು ಪೊಲೀಸರು ಲುಕೌಟ್ ನೋಟಿಸ್ ಜಾರಿಗೊಳಿಸಿದ್ದರು. ಮಾರ್ಚ್ 13ರಂದು ಕುವೈತ್ನಿಂದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ನಿಲ್ದಾಣದ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. 11 ವ್ಯಕ್ತಿಗಳು ನೀಡಿರುವ 168.13 ಕೋಟಿ ಮೌಲ್ಯದ ಎಲೆಕ್ಟ್ರಾನಿಕ್ ಬ್ಯಾಂಕ್ ಗ್ಯಾರಂಟಿಗಳು ನಕಲಿ ಎಂಬುದು ದೃಢಪಟ್ಟ ಬಳಿಕ ಅವರು ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನ್ಯಾಷನಲ್ ಇ-ಗೌವರ್ನೆನ್ಸ್ ಸರ್ವಿಸ್ ಲಿಮಿಟೆಡ್ (NeSL) ಅಧಿಕಾರಿಯೊಬ್ಬರು ಫೆಬ್ರವರಿ 7ರಂದು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸರ್ಕಾರಿ ಟೆಂಡರ್‌ಗಳಲ್ಲಿ ಭಾಗವಹಿಸುವ ವ್ಯಕ್ತಿಗಳು ಅಥವಾ ಖಾಸಗಿ ಕಂಪನಿಗಳ ಪರವಾಗಿ ಬ್ಯಾಂಕುಗಳು ಒದಗಿಸುವ ಗ್ಯಾರಂಟಿಗಳನ್ನು ಇ-ಬ್ಯಾಂಕ್ ಗ್ಯಾರಂಟಿಗಳು ಎನ್ನಲಾಗುತ್ತದೆ. ಈ ಪ್ರಕರಣದಲ್ಲಿ ಆರೋಪಿ ಆಶಿಶ್ ರಾಯ್, ಸಂಸ್ಥೆಗಳನ್ನು ಸಂಪರ್ಕಿಸಿ ಇ - ಬ್ಯಾಂಕ್ ಗ್ಯಾರಂಟಿ ಪ್ರಮಾಣಪತ್ರಗಳನ್ನು ನೀಡುವುದಾಗಿ ಕಮಿಷನ್ ಪಡೆಯುತ್ತಿದ್ದ. ಕೆಲವೇ ಸಮಯದಲ್ಲಿ ಆನ್‌ಲೈನ್ ಮೂಲಕ ಇ-ಗ್ಯಾರಂಟಿ ಪ್ರಮಾಣ ಪತ್ರಗಳನ್ನು ನೀಡಿ, 5 ಕೋಟಿ ರೂಪಾಯಿ ಕಮಿಷನ್ ಪಡೆದಿದ್ದ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಆರೋಪಿಯಿಂದ 02 ಲ್ಯಾಪ್‌ಟಾಪ್‌ಗಳು, 06 ವಿವಿಧ ಕಂಪನಿಯ ಮೊಬೈಲ್ ಫೋನ್‌ಗಳು, 01 ಪೆನ್‌ಡ್ರೈವ್ ಹಾಗೂ 10 ವಿವಿಧ ಬ್ಯಾಂಕ್‌ಗಳ ಚೆಕ್ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಮತ್ತೋರ್ವ ಆರೋಪಿ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಕಾರ್ಯ ಮುಂದುವರೆದಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಥಾಯ್ಲೆಂಡ್ನಲ್ಲಿ ಭಾರತೀಯರಿಂದ ಸೈಬರ್ ವಂಚನೆ ಮಾಡಿಸುತ್ತಿದ್ದ ಜಾಲ ಬೆಳಕಿಗೆ; ಇಬ್ಬರ ಬಂಧನ - Cyber Fraud