ರಾಮನಗರ:ಬೊಂಬೆನಗರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಇದೀಗ ಮೂರನೇ ಬಾರಿ ಉಪಚುನಾವಣೆ ಎದುರಾಗಿದೆ. ಈ ಹಿಂದೆ ನಡೆದಿದ್ದ ಎರಡು ಉಪಚುನಾಣೆಯಲ್ಲಿ ಒಮ್ಮೆ ಜೆಡಿಎಸ್ ಹಾಗೂ ಮತ್ತೊಮ್ಮೆ ಬಿಜೆಪಿ ಜಯಿಸಿತ್ತು. ಆದರೆ, ಈ ಬಾರಿ ಎನ್ಡಿಎ ಮೈತ್ರಿ ಹಿನ್ನೆಲೆಯಲ್ಲಿ ಈ ಎರಡೂ ಪಕ್ಷಗಳೇ ಕ್ಷೇತ್ರದ ಟಿಕೆಟ್‌ಗಾಗಿ ಪರಸ್ಪರ ಪೈಪೋಟಿ ನಡೆಸುವ ಪರಿಸ್ಥಿತಿ ಎದುರಾಗಿದೆ.
ಬೊಂಬೆನಗರಿಗೆ ಮತ್ತೊಂದು ಬೈ ಎಲೆಕ್ಷನ್: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಈ ಹಿಂದೆ 2009, 2011ರಲ್ಲಿ ಎರಡು ಬಾರಿ ಉಪ ಚುನಾವಣೆ ಎದುರಾಗಿತ್ತು. 2009ರ ಉಪ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಿದ್ದರೆ, 2011ರಲ್ಲಿ ಕ್ಷೇತ್ರವನ್ನು ಬಿಜೆಪಿ ವಶಪಡಿಸಿಕೊಂಡಿತ್ತು.
2008 ರಲ್ಲಿ ನಡೆದಿದ್ದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಶಾಸಕರಾಗಿದ್ದ ಸಿ.ಪಿ. ಯೋಗೇಶ್ವರ್ 2009ರಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗಿ ತಮ್ಮ ಶಾಸಕರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಬಳಿಕ 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧಿಸಿ ಯೋಗೇಶ್ವರ್ ಸೋಲು ಅನುಭವಿಸಿದ್ದರು. ಅದೇ ವರ್ಷ ನಡೆದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ಎಂ.ಸಿ. ಅಶ್ವತ್, ಕಾಂಗ್ರೆಸ್‌ನಿಂದ ಟಿ.ಕೆ. ಯೋಗೇಶ್, ಬಿಜೆಪಿಯಿಂದ ಸಿ.ಪಿ. ಯೋಗೇಶ್ವರ್ ಸ್ಪರ್ಧಿಸಿದ್ದರು. ಇಲ್ಲಿ ಎಂ.ಸಿ. ಅಶ್ವತ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಸಿ.ಪಿ.ಯೋಗೇಶ್ವರ್ ವಿರುದ್ಧ ಜಯ ಗಳಿಸಿದ್ದರು. ಇದರಿಂದಾಗಿ ಮೊದಲ ಉಪಚುನಾವಣೆಯಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿತ್ತು.
2011ರಲ್ಲಿ ಅರಳಿದ ಕಮಲ: ಜೆಡಿಎಸ್‌ನಿಂದ ಆಯ್ಕೆ ಆಗಿದ್ದ ಎಂ.ಸಿ. ಅಶ್ವತ್ 2011ರಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದರು. ಇದರಿಂದಾಗಿ ಎದುರಾದ ಮತ್ತೊಂದು ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ನಾಗರಾಜ್, ಕಾಂಗ್ರೆಸ್‌ನಿಂದ ರಘುನಂದನ್ ರಾಮಣ್ಣ ಹಾಗೂ ಬಿಜೆಪಿಯಿಂದ ಸಿ.ಪಿ. ಯೋಗೇಶ್ವರ್ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಯೋಗೇಶ್ವರ್ ಗೆಲುವು ಸಾಧಿಸಿದ್ದು, ತಾಲೂಕಿನಲ್ಲಿ ಮೊದಲ ಬಾರಿ ಬಿಜೆಪಿ ಅರಳಿತ್ತು.