ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರ ಒಳಪಡುವ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿಯೇ ಮುಂದುವರಿದಿದೆ. ಕಾಂಗ್ರೆಸ್ ಬಿಡುಗಡೆ ಮಾಡಿರುವ ಎರಡನೇ ಪಟ್ಟಿಯಲ್ಲೂ ಚಾಮರಾಜನಗರದ ಟಿಕೆಟ್ ಫೈನಲ್ ಆಗಿಲ್ಲ. ಸಿಎಂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲ್ಲೇಬೇಕಾದ ಅನಿವಾರ್ಯತೆ ಇದ್ದು ಅಳೆದು-ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದೆ.
ಸಚಿವ ಮಹಾದೇವಪ್ಪ ಅವರನ್ನು 'ಲೋಕ' ಅಖಾಡಕ್ಕಿಳಿಸಬೇಕು ಎನ್ನುವುದು ಹೈಕಮಾಂಡ್ ಮತ್ತು ಸಿದ್ದರಾಮಯ್ಯ ಅವರ ಒಲವು. ಆದರೆ, ತನ್ನ ಬದಲು ಮಗ ಸುನೀಲ್ ಬೋಸ್ಗೆ ಟಿಕೆಟ್ ಕೊಡುವಂತೆ ಮಹಾದೇವಪ್ಪ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿ ಆಯ್ಕೆ ವಿಳಂಬವಾಗುತ್ತಿದೆ. ಇದೇ ವೇಳೆ, ಅಂತಿಮವಾಗಿ ಶಾಸಕ ದರ್ಶನ್ ಧ್ರುವನಾರಾಯಣ ಕಣಕ್ಕಿಳಿದರೂ ಅಚ್ಚರಿಯಿಲ್ಲ ಎನ್ನುತ್ತಿವೆ ಕಾಂಗ್ರೆಸ್ ಮೂಲಗಳು.
ಸಿಎಂ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿ ಬೀಗಿದೆ. ಕ್ಷೇತ್ರವನ್ನು ಮತ್ತೆ ಕೈವಶ ಮಾಡಿಕೊಳ್ಳಬೇಕಾದ ಅವಶ್ಯಕತೆಯೂ ಆ ಪಕ್ಷಕ್ಕಿದೆ. ಟಿಕೆಟ್ ರೇಸ್ನಲ್ಲಿ ಸುನೀಲ್ ಬೋಸ್, ದರ್ಶನ್ ಧ್ರುವನಾರಾಯಣ, ಡಿ.ಎನ್.ನಟರಾಜು, ಜಿ.ಎನ್.ನಂಜುಂಡಸ್ವಾಮಿ ಇದ್ದು ಎಲ್ಲರೂ ಲಾಬಿ ನಡೆಸುತ್ತಿದ್ದಾರೆ.
ಅಂತಿಮವಾಗಿ ಸಿದ್ದರಾಮಯ್ಯ ಸೂಚಿಸಿದವರಿಗೆ ಎಂಪಿ ಟಿಕೆಟ್ ಸಿಗಲಿದ್ದು, ಯಾರಾಗುತ್ತಾರೆ ಹುರಿಯಾಳು? ಎಂಬುದೀಗ ಸಸ್ಪೆನ್ಸ್. ಕಾಂಗ್ರೆಸ್ ಹೈಕಮಾಂಡ್ ಮಾತಿಗೆ ಕಟ್ಟುಬಿದ್ದು ಮಹಾದೇವಪ್ಪ ಅವರೇ ಚುನಾವಣೆಗೆ ನಿಲ್ಲುವರೋ ಇಲ್ಲವೇ ಮಗನಿಗೆ ಟಿಕೆಟ್ ಕೊಡಿಸುತ್ತಾರೋ?, ಅಥವಾ ಧ್ರುವನಾರಾಯಣ ಪುತ್ರ ದರ್ಶನ್ ಅಚ್ಚರಿ ಅಭ್ಯರ್ಥಿಯಾಗಿ ಹೊರಹೊಮ್ಮುವರೇ ಎಂಬುದನ್ನು ಕಾದು ನೋಡಬೇಕಿದೆ.