ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯ ಮತದಾನ ದಿನ ಬಿಜೆಪಿ ಮತ್ತು ಅದರ ಗೂಂಡಾಗಳಿಂದ ನಡೆಯುವ ಅಕ್ರಮಗಳನ್ನು ಸೆರೆಹಿಡಿಯಲು ಸ್ಪೈ (ರಹಸ್ಯ ಕ್ಯಾಮೆರಾ) ಮತ್ತು ಬಾಡಿ ಕ್ಯಾಮೆರಾಗಳನ್ನು ವಿತರಿಸಿದ್ದೇವೆ ಎಂದು ಆಮ್ ಆದ್ಮಿ ಪಕ್ಷ(ಎಎಪಿ)ದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಅಂತಿಮ ಮತಪ್ರಚಾರದ ದಿನವಾದ ಇಂದು ಮಾತನಾಡಿದ ಅವರು, ಎಎಪಿ ಐತಿಹಾಸಿಕ ಜಯದೆಡೆಗೆ ಮುನ್ನಡೆಯುತ್ತಿದೆ. ಬಿಜೆಪಿ ಕೆಟ್ಟ ಸೋಲು ಅನುಭವಿಸಲಿದೆ. ಈ ಕಾರಣಕ್ಕೆ ಅವರು ಅಕ್ರಮಗಳಿಗೆ ಮುಂದಾಗಬಹುದು ಎಂದು ಆರೋಪಿಸಿದ್ದಾರೆ.
ಬಿಜೆಪಿ ಗೂಂಡಾಗಳಿಂದ ನಡೆಯುವ ಅಕ್ರಮಗಳನ್ನು ಸೆರೆಹಿಡಿಯಲು ನಾವು ಕೊಳೆಗೇರಿ ನಿವಾಸಿಗಳಿಗೆ ರಹಸ್ಯ ಮತ್ತು ಬಾಡಿ ಕ್ಯಾಮೆರಾಗಳನ್ನು ನೀಡಿದ್ದೇವೆ. ತ್ವರಿತ ಪ್ರತಿಕ್ರಿಯಾ ತಂಡ (ಕ್ಯೂಆರ್‌ಟಿ)ಯನ್ನೂ ಕೂಡ ರಚಿಸಿದ್ದೇವೆ. ಈ ತಂಡ ಅಸಾಂವಿಧಾನಿಕ ಚಟುವಟಿಕೆಗಳನ್ನು 15 ನಿಮಿಷದಲ್ಲಿ ತಡೆಯಲಿದೆ. ಇಂಥ ದುಷ್ಕೃರ್ಮಿಗಳ ಬಂಧಿಸಲಾಗುವುದು ಎಂದು ತಿಳಿಸಿದರು.
ಬಿಜೆಪಿ ಚುನಾವಣೆ ಗೆಲ್ಲಲು ಗೂಂಡಾ ಮತ್ತು ದೆಹಲಿ ಪೊಲೀಸರನ್ನು ಹೆಚ್ಚು ಬಳಸಲಿದೆ. ಅವರು ವಿಶೇಷವಾಗಿ ಕೊಳೆಗೇರಿ ನಿವಾಸಿಗಳ ಮತವನ್ನು ಅಕ್ರಮವಾಗಿ ಪಡೆಯಬಹುದು ಎಂದಿದ್ದಾರೆ. ಕೇಜ್ರಿವಾಲ್ ಅವರ ಈ ಆರೋಪಕ್ಕೆ ಬಿಜೆಪಿ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕೊಳೆಗೇರಿ ನಿವಾಸಿಗಳಿಗೆ ಬಿಜೆಪಿ ಕಾರ್ಯಕರ್ತರು 3ರಿಂದ 5 ಸಾವಿರ ರೂ.ವರೆಗೆ ಆಮಿಷ ನೀಡಿ, ಅವರ ಬೆರಳಿಗೆ ಶಾಯಿ ಹಾಕುವ ಮೂಲಕ ಮತದಾನದಿಂದ ದೂರವಿರುವಂತೆ ನೋಡಿಕೊಳ್ಳಲಿದ್ದಾರೆ ಎಂದು ಕೇಜ್ರಿವಾಲ್ ದೂರಿದ್ದಾರೆ.
ದೆಹಲಿ ವಿಧಾನಸಭೆಗೆ ಫೆ.5ರಂದು ಮತದಾನ ನಡೆಯಲಿದ್ದು, ಫೆ.8ರಂದು ಫಲಿತಾಂಶ ಹೊರಬೀಳಲಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಎಎಪಿ ಮಾಡೆಲ್ ಫೇಲ್; ಆಂಧ್ರ ಸಿಎಂ ಚಂದ್ರಬಾಬು ನಾಯ್ಡು
ಇದನ್ನೂ ಓದಿ: AAPಗೆ ಬಿಗ್ ಬಿಗ್ ಶಾಕ್: ರಾಜೀನಾಮೆಗೆ ಕಾರಣ ನೀಡಿದ 7 ಆಪ್ ಶಾಸಕರು!.. ಕೇಜ್ರಿವಾಲ್ಗೆ ಪತ್ರ!!