ಬೆಂಗಳೂರು: ರಾಷ್ಟ್ರಪತಿ ಅವರನ್ನು ಅವಮಾನ ಮಾಡಿದ ಸಿಎಂ ಸಿದ್ದರಾಮಯ್ಯ ಈ ದೇಶದ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದು, ಸಿದ್ದರಾಮಯ್ಯ ತಮ್ಮ ಕೆಟ್ಟ ಭಾಷೆ ಬದಲಿಸಲು ಟೀಚರ್ ಇಟ್ಟುಕೊಳ್ಳಲಿ ಅಥವಾ ನಾನೇ ಟೀಚರ್ ಆಗಿ ಬರುವೆ ಎಂದು ವಾಗ್ದಾಳಿ ನಡೆಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ನಿನ್ನೆ ಅಹಿಂದ ಹೆಸರಿನಲ್ಲಿ ಕರೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿಗಳಾದ ಮುರ್ಮು ಅವರನ್ನು ಏಕವಚನದಲ್ಲಿ ಸಂಬೋಧಿಸಿದ್ದು ಖಂಡನೀಯ, ಒಬ್ಬ ದಲಿತ ಮಹಿಳೆ ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳು ಇಷ್ಟೊಂದು ಕೀಳಾಗಿ ಅವರನ್ನು ಸಂಬೋಧಿಸಿದ್ದು, ಇದು ಅವರ ವ್ಯಕ್ತಿತ್ವಕ್ಕೆ ಸರಿಯಾದ ಪದಗಳಲ್ಲ. ಅದಾದ ಬಳಿಕವೂ ಅವರು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ನಾವು ಹಿರಿಯರನ್ನು ಹಳ್ಳಿ ಭಾಷೆಯಲ್ಲಿ ಹಾಗೇ ಕರೆಯುವುದಾಗಿ ಹೇಳಿದ್ದಾರೆ. ಈ ರೀತಿ ಹೇಳುವ ಮೂಲಕ ಹಳ್ಳಿಯ ಜನರನ್ನೂ ಅವರು ಅಪಮಾನ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಯಾವ ಹಳ್ಳಿ ಜನರು, ಬಡವರು ಯಾರೇ ಇದ್ದರೂ ಕೂಡ ಯಾವತ್ತೂ ಯಾರನ್ನು ಕೇವಲವಾಗಿ ಅಥವಾ ಏಕವಚನದಲ್ಲಿ ಸಂಬೋಧಿಸುವುದಿಲ್ಲ ಎಂದು ವಿಶ್ಲೇಷಿಸಿದರು. ಹಳ್ಳಿ ಜನರು ಹಿರಿಯರ ಬಗ್ಗೆ ಗೌರವದಿಂದಲೇ ಮಾತನಾಡುತ್ತಾರೆ, ಮುಖ್ಯಮಂತ್ರಿಗಳು ಯಾಕೆ ಇಷ್ಟು ಸುಳ್ಳುಗಳನ್ನು ಹೇಳುತ್ತಾರೆ? ಎಂದು ಪ್ರಶ್ನಿಸಿದ ಅವರು, ಒಂದು ವೇಳೆ ನೀವು ಹಿರಿಯರನ್ನು ಹೋಗೋ ಬಾರೋ ಅನ್ನುವುದಾದರೆ, ಅವಳು ಇವಳು ಎಂಬ ಭಾಷೆ ಪ್ರಯೋಗ ಮಾಡುವುದೇ ಆದರೆ, ಸೋನಿಯಾ ಗಾಂಧಿಯವರು ಹಿರಿಯರಲ್ಲವೇ? ಎಷ್ಟು ಸಾರಿ ನೀವು ಸೋನಿಯಾ ಗಾಂಧಿಯವರನ್ನು ಅವಳು, ಇವಳು ಎಂದು ಮಾತನಾಡಿದ್ದೀರಿ ಎಂದು ಕೇಳಿದರು.
ಸಿದ್ದರಾಮಯ್ಯನವರು ಶಿಕ್ಷರೊಬ್ಬರನ್ನ ಇಟ್ಟುಕೊಳ್ಳಲಿ:ಸಿದ್ದರಾಮಯ್ಯನವರು ತಮ್ಮ ಕೆಟ್ಟ ಭಾಷೆಯನ್ನು ಬದಲಿಸಲು ಟೀಚರ್ವೊಬ್ಬರನ್ನು ಇಟ್ಟುಕೊಳ್ಳಲಿ. 'ನೋಡಿ ಬೇಕಾದರೆ ನಾನೇ ಬರುವೆ' ಎಂದ ಛಲವಾದಿ ನಾರಾಯಣಸ್ವಾಮಿ ಯಾರ್ಯಾರನ್ನು ಯಾವ್ಯಾವ ರೀತಿ ಸಂಬೋಧಿಸಬೇಕೆಂದು ಹೇಳಿ ಕೊಡುವೆ ಎಂದು ಟಕ್ಕರ್ ಕೊಟ್ಟರು.