ಛಲವಾದಿ ನಾರಾಯಣಸ್ವಾಮಿ (ETV Bharat) ಕೋಲಾರ: ದಲಿತ ಸಮುದಾಯಕ್ಕಾಗಿರುವ ಅನ್ಯಾಯವನ್ನು ಖಂಡಿಸಿ ನಾಳೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಪಾದಯಾತ್ರೆ ಹೊರಡುತ್ತಿದ್ದೇವೆ. ನಮ್ಮ ಪಾದಯಾತ್ರೆ ಮೈಸೂರಿಗೆ ತಲುಪಿ ವಾಪಸ್ ಬೆಂಗಳೂರಿಗೆ ಬರುವಷ್ಟರಲ್ಲಿ ಈ ಸರ್ಕಾರ ಇರುವುದಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಭವಿಷ್ಯ ನುಡಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವಾರದಲ್ಲಿ ಎಲ್ಲವೂ ನಿರ್ಧಾರವಾಗಲಿದೆ ಎಂದು ಸೂಚ್ಯವಾಗಿ ಹೇಳಿದರು.
ಈ ಸರ್ಕಾರವೂ ಹೋಗಬೇಕು. ಸಿಎಂ ಸಿದ್ದರಾಮಯ್ಯನವರೂ ಹೋಗಬೇಕು. ಸಚಿವ ಸಂಪುಟವೇ ಭ್ರಷ್ಟಾಚಾರದಲ್ಲಿ ತೊಡಗಿದೆ. ಹಾಗಾಗಿ, ಇಡೀ ಸರ್ಕಾರವೇ ಕೆಲವೇ ದಿನಗಳಲ್ಲಿ ಪತನವಾಗಲಿದೆ. ದಲಿತರ ಭೂಮಿಗೆ ನ್ಯಾಯಕ್ಕಾಗಿ, ದಲಿತರಿಗಾಗಿ ಪಾದಯಾತ್ರೆ ಮಾಡುತ್ತಿದ್ದೇವೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬ ಭಾಗಿಯಾಗಿದೆ. ಈ ಸರ್ಕಾರ ಘೋರ ಅಪಚಾರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಹಣವನ್ನು ವೈನ್ಶಾಪ್ ಚಿನ್ನದಂಗಡಿಗಳಿಗೆ ಹಾಕಿದ್ದಾರೆ. ಬೇರೆ ಯಾರಾದರೂ ಆಗಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗುತ್ತಿದ್ದರು. ಅಂತಹ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಗ್ಯಾರಂಟಿಗಳ ಮೂಲಕ ಹಣ ಹೊಡೆಯಲು ನಮ್ಮ ಯೋಜನೆಗಳನ್ನು ನಿಲ್ಲಿಸಿದ್ದೀರಿ. 52 ಸಾವಿರ ಕೋಟಿ ಹಣ ಖಜಾನೆಯಿಂದ ಬಿಡುಗಡೆ ಆದ ಮೇಲೆ ನಮ್ಮ ದಲಿತ ಸಮುದಾಯದ 25 ಕೋಟಿ ಹಣ ಯಾಕೆ ತೆಗೆದ್ರಿ?. ಎಸ್‌ಸಿಪಿ, ಟಿಎಸ್‌ಪಿ ಹಣ ದುರ್ಬಳಕೆ ಮಾಡಲಾಗುತ್ತಿದೆ. ಇದು ದಲಿತ ವಿರೋಧಿ ಅಲ್ವಾ ಎಂದು ಪ್ರಶ್ನಿಸಿದರು.
ಮುಡಾ ಡಿನೋಟಿಫಿಕೇಷನ್ ಮಾಡಲು ಆಗಲ್ಲ. ದಲಿತ ಕುಟುಂಬಕ್ಕೆ ಸೇರಿದ ದೇವರಾಜ್, ಮಲ್ಲಯ್ಯ, ಮಲ್ಲಿಕಾರ್ಜುನ ಎಂಬ ಮೂವರ ಆಸ್ತಿ ಅದು. 1998 ರಲ್ಲಿ ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಡಿನೋಟಿಫಿಕೇಷನ್ ಮಾಡಿದ್ದಾರೆ. 2004ರಲ್ಲಿ ಇವರ ಹೆಸರಿಗೆ ರಿಜಿಸ್ಟರ್ ಮಾಡಿಕೊಳ್ಳುತ್ತಾರೆ. ಕನ್ವರ್ಷನ್ ಮಾಡಿ ಕೊಡುತ್ತಾರೆ, ಹೆಂಡತಿಗೆ ಮುಪ್ಪತ್ತಾಗಿ ಬಂದಿದೆ ಎಂದು ಕೊಡುತ್ತಾರೆ. 20 ವರ್ಷಗಳ ಹಿಂದೆಯೇ ಇಷ್ಟೆಲ್ಲಾ ನಡೆದಿದೆ ಎಂದರು.
ನಿವೇಶನಗಳನ್ನು ಮಾಡಿದ್ದೀರಿ ಎಂದು ಆಮೇಲೆ 50-50 ರೇಶ್ಯೋನಲ್ಲಿ 14 ನಿವೇಶನ ಪಡೆದಿದ್ದಾರೆ. ಅಲ್ಲಿನ ಡಿಸಿ 14 ಪತ್ರಗಳನ್ನ ಬರೆದ ಕಾರಣ ಆ ಅವರನ್ನು ವರ್ಗಾವಣೆ ಮಾಡಿದ್ದಾರೆ. 2016 -17 ರಲ್ಲಿ ನಿವೇಶನ ಪಡೆಯಲ್ಲ. ಆದರೆ ಬಿಜೆಪಿ ಸರ್ಕಾರ ಇದ್ದಾಗ ಇವರ ಹೆಸರಿಗೆ ಮಾಡಿಕೊಂಡು ನಾನು ಕೇಳಿಲ್ಲ, ಬಿಜೆಪಿಯವರು ಕೊಟ್ಟಿದ್ದಾರೆ ಎಂದು ಈಗ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ದಲಿತರ ಜಮೀನನ್ನು ಕಬಳಿಸಿದವರು ಇವರೇ ಎಂದು ಸಿದ್ದರಾಮಯ್ಯ ವಿರುದ್ಧ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಮುಡಾ ಹಗರಣದ ವಿರುದ್ಧ ನಾಳೆ ಮೈಸೂರು ಚಲೋಗೆ ಬಿಜೆಪಿ, ಜೆಡಿಎಸ್ ಸಿದ್ಧತೆ - BJP JDS Mysuru Chalo