ಚಿಕ್ಕಮಗಳೂರು:ಜಿಲ್ಲೆಯ ಕಳಸ ಮತ್ತು ಹೊರನಾಡು ಭಾಗದಲ್ಲಿ ಒಂದು ಕ್ಷಣವೂ ಬಿಡುವು ನೀಡದೇ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದಕ್ಕೆ ಪೈಪೋಟಿ ನೀಡುವಂತೆ ಕುದುರೆಮುಖ ಭಾಗದಲ್ಲೂ ನಿರಂತರ ಮಳೆ ಸುರಿಯುತ್ತಿದ್ದು, ಈಗ ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯಲು ಪ್ರಾರಂಭಿಸಿದೆ. ಭದ್ರಾ ನದಿಯ ಹೆಬ್ಬಾಳೆ ಸೇತುವೆ ಮೇಲೆ ಜಾನುವಾರುವೊಂದು ಎಲ್ಲರ ಕಣ್ಣ ಮುಂದೆಯೇ ಕೊಚ್ಚಿ ಹೋಗಿದೆ.
ಈಗಾಗಲೇ ಕಳಸ ತಾಲೂಕಿನಲ್ಲಿರುವ ಹೆಬ್ಬಾಳ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಕಳೆದ ಎರಡು ದಿನಗಳಿಂದ ಪ್ರವಾಸಿಗರಿಗೆ ಈ ಸೇತುವೆ ಮೇಲೆ ಸಂಚಾರ ಮಾಡಲು ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ. ಎರಡು ಭಾಗದಲ್ಲಿಯೂ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಬ್ಯಾರಿಕೇಡ್ ಗೇಟ್ಗಳನ್ನು ಅಳವಡಿಸಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಧಾರಾಕಾರ ಮಳೆಗೆ ಜಲಾವೃತವಾದ ತೋಟಗಳು: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಅದರಲ್ಲೂ ವಿಶೇಷವಾಗಿ ಶೃಂಗೇರಿ, ಕೊಪ್ಪ, ಕುದುರೆಮುಖದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಇದರಿಂದ ತುಂಗಾ, ಭದ್ರಾ, ಹೇಮಾವತಿ ನದಿಗಳು ತುಂಬಿ ಹರಿಯಲು ಪ್ರಾರಂಭಿಸಿವೆ. ತುಂಗಾ ನದಿ ಅಬ್ಬರಕ್ಕೆ ಶೃಂಗೇರಿಯಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದ್ದು, ತುಂಬಿ ಹರಿಯುತ್ತಿರುವ ನದಿಯಲ್ಲಿನ ನೀರು ನದಿ ಅಂಚಿನ ಗ್ರಾಮಗಳಲ್ಲಿ ನುಗ್ಗಿ ತೋಟಗಳು ಜಲಾವೃತವಾಗಿವೆ.
ಶೃಂಗೇರಿ ತಾಲೂಕಿನ ಕೂತಗೋಡು ವ್ಯಾಪ್ತಿಯ ಬೆಟ್ಟಗೆರೆ, ಕೆರೆಮನೆ ಗ್ರಾಮಗಳಲ್ಲಿ ಈ ಘಟನೆ ಸಂಭವಿಸಿದ್ದು, ತುಂಗಾ ನದಿ ಉಕ್ಕಿದ ಪರಿಣಾಮ ತೋಟಗಳು ಮುಳುಗಡೆಯಾಗಿದೆ. ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ ಉಂಟಾಗಿದ್ದು, ಕಳೆದ ಮೂರು ದಿನಗಳಿಂದ ಕಡಿಮೆಯಾಗದ ತುಂಗಾ ಪ್ರವಾಹ ನೋಡಿ ಸ್ಥಳೀಯರು ಬೆಚ್ಚಿ ಬೀಳುವಂತಾಗಿದೆ. ನೆರೆ ತಗ್ಗುವಂತೆ ತುಂಗಾ ನದಿ ನೀರಿಗೆ ಸ್ಥಳೀಯರು ಪೂಜೆ ಮಾಡುತ್ತಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಭಾರಿ ಮಳೆ ಆಗುತ್ತಿದ್ದು, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಕೆಮ್ಮಣ್ಣು ಗುಂಡಿ, ದತ್ತಪೀಠ, ಗಾಳಿ ಕೆರೆ ಸುತ್ತಮುತ್ತ ಬಾರಿ ಮಳೆಯಾಗುತ್ತಿದೆ. ನಿರಂತರ ಮಳೆ ಸುರಿಯುತ್ತಿರುವ ಕಾರಣ ದತ್ತಪೀಠ ರಸ್ತೆಗೆ ಹೋಗುವ ದಾರಿ ಮಧ್ಯೆ ಸಿಗುವ ಹೊನ್ನಮ್ಮನ ಹಳ್ಳ ಜಲಪಾತ ತನ್ನ ರೌದ್ರಾವತಾರ ತೋರಿಸಲು ಪ್ರಾರಂಭಿಸಿದೆ.