ಕಾರವಾರ (ಉತ್ತರ ಕನ್ನಡ) : ಅಕ್ರಮವಾಗಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಹಾಗೂ ಬಡ ಜನರಿಂದ ಅತ್ಯಧಿಕ ಬಡ್ಡಿ ವಸೂಲಿ ಮಾಡುತ್ತಿದ್ದವರ ಮೇಲೆ ಉತ್ತರಕನ್ನಡ ಪೊಲೀಸರು ಬುಧವಾರ ತಡರಾತ್ರಿಯೂ ದಾಳಿ ಮುಂದುವರಿಸಿದ್ದು, ಇಂತಹ ಅಕ್ರಮ ವ್ಯವಹಾರದಲ್ಲಿ ತೊಡಗಿಕೊಂಡಿದ್ದವರ ಮನೆಗಳಲ್ಲಿ ಪರಿಶೀಲನೆ ನಡೆಸಿ, ಹಲವು ದಾಖಲೆಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಿಲ್ಲೆಯ ಹಳಿಯಾಳ, ಯಲ್ಲಾಪುರ, ಮುಂಡಗೋಡು ಭಾಗದಲ್ಲಿ ಮೀಟರ್ ಬಡ್ಡಿ ದಂಧೆ ಜೋರಾಗಿ ನಡೆಯುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆ ಇಂತವರ ಪತ್ತೆಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಅದರಂತೆ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ನೀಡಿ ಅಕ್ರಮ ಬಡ್ಡಿ ವ್ಯವಹಾರ ನಡೆಸುತ್ತಿರುವವರ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿತ್ತು.
ಅಕ್ರಮ ಬಡ್ಡಿದಂಧೆ ವಿರುದ್ಧ ಪೊಲೀಸರ ಕಾರ್ಯಾಚರಣೆ (ETV Bharat) ಅದರಂತೆ ಮುಂಡಗೋಡ ತಾಲೂಕಿನಲ್ಲಿಯೂ ಈ ಬಗ್ಗೆ ಅತ್ಯಧಿಕ ದೂರು ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆ ಎಸ್ಪಿ ನೇತೃತ್ವದ ಪೊಲೀಸರ ತಂಡ ಮುಂಡಗೋಡಿನಲ್ಲಿ ಮಂಗಳವಾರ ತಡರಾತ್ರಿ ಅಕ್ರಮವಾಗಿ ಲೇವಾದೇವಿ ವ್ಯವಹಾರ ಮಾಡುವವರ ಮನೆ ಮೇಲೆ ದಾಳಿ ನಡೆಸಿದ್ದರು. ಮೈಕ್ರೋ ಫೈನಾನ್ಸ್ ವ್ಯವಹಾರ, ಅಕ್ರಮ ಬಡ್ಡಿ ವ್ಯವಹಾರ ನಡೆಸುವವರ ಬಗ್ಗೆ ವಿಚಾರಣೆ ನಡೆಸಿದ್ದರು. ಈ ವೇಳೆ ಮೀಟರ್ ಬಡ್ಡಿ ದಂಧೆ ನಡೆಸುವವರಿಂದ ಹಲವು ದಾಖಲಾತಿಗಳನ್ನು ವಶಕ್ಕೆ ಪಡೆದಿದ್ದರು.
ಹಳಿಯಾಳದಲ್ಲೂ ಪೊಲೀಸರ ಕಾಯಾಚರಣೆ : ಮೀಟರ್ ಬಡ್ಡಿ, ಲೇವಾದೇವಿ ಗ್ಯಾಂಗ್ ಸೇರಿದಂತೆ ಇತ್ಯಾದಿ ಅಕ್ರಮ ಚಟುವಟಿಕೆಗಳ ಬಗ್ಗೆ ಹಳಿಯಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ಬಂದ ಹಿನ್ನೆಲೆ ಪೊಲೀಸರು ಬುಧವಾರ ತಡರಾತ್ರಿ ಕಾರ್ಯಾಚರಣೆ ನಡೆಸಿದರು.
ಅಕ್ರಮ ಬಡ್ಡಿ ವ್ಯವಹಾರ ನಡೆಸುತ್ತಿರುವವರ ಮನೆಯಲ್ಲಿ ಪೊಲೀಸರ ಕಾರ್ಯಾಚರಣೆ (ETV Bharat) ಹಳಿಯಾಳ ಪೊಲೀಸ್ ಠಾಣಾ ವ್ಯಾಪ್ತಿಯ 7 ಕಡೆ ಬಡ್ಡಿ ವ್ಯವಹಾರ ಮಾಡಿ ಬಂದ ಹಣದಿಂದ ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿತ್ತು. ಈ ಮೇರೆಗೆ ಸರ್ಚ್ ವಾರೆಂಟ್ ಅನುಮತಿ ಆದೇಶದೊಂದಿಗೆ ತೆರಳಿದ ಪೊಲೀಸರು ಜೂಜಾಡುತ್ತಿದ್ದ ಹಳಿಯಾಳ ಕಿಲ್ಲಾದ ಚಂದ್ರಕಾಂತ ನಾರಾಯಣ ಗೊಂದಳಿ, ವಿಜಯ ನೀಲಕಂಠ ಬೊಬಾಟ, ಗುತ್ತಿಗೇರಿ ಗಲ್ಲಿಯ ಪ್ರಕಾಶ ಶಿವಾಜಿ ಗಾಂಜಾಳಿ, ಚೌಹಾಣ ಪ್ಲಾಟ್ನ ರಾಕೇಶ್ ದಿನಕರ ವಾಲೇಕರ, ಶುಭಂ ತಂದೆ ರಾಮನಾಥ ನಾಯ್ಕ, ಕಾರ್ಮೆಲ್ ಕ್ರಾಸ್ನ ಪವನ ಜೀವನ ಹಳ್ಳೂರ, ಚಲುವಾದಿ ಗಲ್ಲಿಯ ಸಂತೋಷ ಸಿದ್ದಪ್ಪ ನಾಯ್ತ ಸೇರಿ ಒಟ್ಟು 7 ಜನರ ವಿರುದ್ಧ ಭದ್ರತಾ ಕಾಯ್ದೆಯಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ.
ದಾಂಡೇಲಿ ಪೊಲೀಸರ ಕಾರ್ಯಾಚರಣೆ : ದಾಂಡೇಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ಹಾಗೂ ಅಕ್ರಮ ಬಡ್ಡಿ ವ್ಯವಹಾರ, ಇತ್ಯಾದಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ ಆರೋಪದ ಹಿನ್ನೆಲೆ ಬುಧವಾರ ಕಾರ್ಯಾಚರಣೆ ನಡೆಸಿದ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ.
ದಾಂಡೇಲಿ ಗಾಂಧಿನಗರದ ಕಿಶನ ಸುಭಾಸ ಕಂಜರಬಾಟ, ವಿನೋದ ಸುರೇಶ ಕಂಜರವಾಟ ಮೀನೇಕರ, ಮಾರುತಿ ನಗರದ ವಿಜಯ ಸಾಯಣ್ಣ ಪೆರುಮಲ, ಸಾಂ ಆಶ್ರಯ ಕಾಲೋನಿ ಮೌಲಾ ಕಲಾಲ ಅಲಿಯಾಸ್ ರಿಕ್ಷಾವಾಲಾ ಅವರ ಮನೆಗಳ ಮೇಲೆ ದಾಳಿ ಮಾಡಲಾಗಿದೆ. ಶೋಧದ ವೇಳೆ ಪೊಲೀಸರು ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂದಿಸಿದ ಚೆಕ್, ಖಾಲಿ ಇ-ಸ್ಟಾಂಪ್ ಪೇಪರ್ ಸೇರಿದಂತೆ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ :ಮೈಕ್ರೋ ಫೈನಾನ್ಸ್ ಕಿರುಕುಳ ಆರೋಪ; ಹಾವೇರಿ ಜಿಲ್ಲೆಯಲ್ಲಿ ಮತ್ತೋರ್ವ ವ್ಯಕ್ತಿ ಆತ್ಮಹತ್ಯೆ - MICRO FINANCE CASE