ಕರ್ನಾಟಕ

karnataka

ETV Bharat / state

ರಸ್ತೆಗಳ ಅಗಲೀಕರಣಕ್ಕಾಗಿ 15.5 ಎಕರೆ ಅರಮನೆ ಮೈದಾನದ ಜಾಗ ಸ್ವಾಧೀನಪಡಿಸಿಕೊಳ್ಳಲು ಸಂಪುಟ ಸಭೆಯಲ್ಲಿ ನಿರ್ಧಾರ - Cabinet meeting

ರಸ್ತೆಗಳ ಅಗಲೀಕರಣಕ್ಕಾಗಿ 15.5 ಎಕರೆ ಅರಮನೆ ಮೈದಾನದ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ರಸ್ತೆಗಳ ಅಗಲೀಕರಣಕ್ಕಾಗಿ 15.5 ಎಕರೆ ಅರಮನೆ ಮೈದಾನದ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಸಂಪುಟ ಸಭೆಯಲ್ಲಿ ನಿರ್ಧಾರ
ರಸ್ತೆಗಳ ಅಗಲೀಕರಣಕ್ಕಾಗಿ 15.5 ಎಕರೆ ಅರಮನೆ ಮೈದಾನದ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಸಂಪುಟ ಸಭೆಯಲ್ಲಿ ನಿರ್ಧಾರ

By ETV Bharat Karnataka Team

Published : Mar 14, 2024, 9:57 PM IST

ಬೆಂಗಳೂರು: ಬೆಂಗಳೂರು ಅರಮನೆ ಮೈದಾನಕ್ಕೆ ಹೊಂದಿಕೊಂಡಿರುವ ಬಳ್ಳಾರಿ ರಸ್ತೆ ಹಾಗೂ ಜಯಮಹಲ್‌ ರಸ್ತೆಗಳ ಅಗಲೀಕರಣಕ್ಕಾಗಿ 15.5 ಎಕರೆ ಅರಮನೆ ಮೈದಾನದ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಇದಕ್ಕೆ ಪರಿಹಾರವಾಗಿ ಟಿಡಿಆರ್‌ನ್ನು ಯಾರಿಗೆ ನೀಡಬೇಕು ಎಂಬ ಬಗ್ಗೆ ನ್ಯಾಯಾಲಯವನ್ನೇ ಕೋರಲು ತೀರ್ಮಾನಿಸಲಾಗಿದೆ.

ಸುಪ್ರೀಂ ಕೋರ್ಟ್‌ ಸೂಚನೆ ಹೊರತಾಗಿಯೂ ಜಾಗ ಸ್ವಾಧೀನಪಡಿಸಿಕೊಂಡು ಪರಿಹಾರ ನೀಡದ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತರಿಗೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಸಚಿವ ಸಂಪುಟದಲ್ಲಿ ಈ ನಿರ್ಧಾರ ಮಾಡಲಾಗಿದೆ.

ಈ ಕುರಿತು ಸಚಿವ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, ಈ ಹಿಂದೆ ಅರಮನೆ ಮೈದಾನದ ಎರಡೂ ಕಡೆ ಇರುವ ರಸ್ತೆಗಳ ಅಗಲೀಕರಣಕ್ಕಾಗಿ 15.5 ಎಕರೆ ಜಮೀನು ಸ್ವಾಧೀನಕ್ಕೆ ಸರ್ಕಾರ ನಿರ್ಧಾರ ಮಾಡಿತ್ತು. ಈ ಸಂಬಂಧ ಮಾಲೀಕರಿಗೆ ಟಿಡಿಆರ್‌ ನೀಡಿ ಅರಮನೆ ಜಾಗ ರಸ್ತೆ ಅಗಲೀಕರಣಕ್ಕೆ ಬಳಸಿಕೊಳ್ಳುವಂತೆ ನ್ಯಾಯಾಲಯ ಹೇಳಿತ್ತು. ಬಳಿಕ ರಾಜ್ಯ ಸರ್ಕಾರ ರಸ್ತೆ ಅಗಲೀಕರಣಕ್ಕೆ ಜಾಗವನ್ನು ಬಳಸಿಕೊಂಡಿರಲಿಲ್ಲ ಎಂದರು.

ಈ ನಡುವೆ 2006-07 ರಲ್ಲಿ 15.5 ಎಕರೆ ಹೊರತುಪಡಿಸಿ ಅರಮನೆ ಮೈದಾನದ ಒಳಗಡೆಗೆ ರಾಜ್ಯ ಸರ್ಕಾರ ಕಾಂಪೌಂಡ್‌ ಗೋಡೆ ನಿರ್ಮಾಣ ಮಾಡಿತ್ತು. ಹೀಗಾಗಿ ಅರಮನೆ ಮೈದಾನದ ಮಾಲೀಕರು ಎಂದು ಹೇಳಿಕೊಳ್ಳುವವರು ಕೆಲವರು ಕೋರ್ಟ್‌ ಮೊರೆ ಹೋಗಿದ್ದರು. ಹೀಗಾಗಿ ನ್ಯಾಯಾಲಯವು ರಸ್ತೆ ಅಗಲೀಕರಣಕ್ಕೆ ಆ ಜಾಗ ಪಡೆಯುತ್ತಾರೆಯೇ ಅಥವಾ ಇಲ್ಲವೇ? ಎಂದು ಪ್ರಶ್ನೆ ಮಾಡಿದೆ. ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡುವ ಸಲುವಾಗಿ ಹಾಗೂ ಭವಿಷ್ಯದ ರಸ್ತೆ ಅಗಲೀಕರಣದ ಅಗತ್ಯಗಳಿಗಾಗಿ ರಸ್ತೆ ಅಗಲೀಕರಣಕ್ಕೆ ಜಾಗ ಬಳಸಿಕೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಟಿಡಿಆರ್‌ ಯಾರಿಗೆ ? :ಅರಮನೆ ಮೈದಾನದ 450 ಎಕರೆ ಜಮೀನಿನ ಮಾಲೀಕತ್ವ ಹಕ್ಕು ಈಗ ಖಾಸಗಿಯವರ ಬಳಿ ಇಲ್ಲ.
1996ರಲ್ಲಿ ರಾಜ್ಯ ಸರ್ಕಾರ ಪ್ರತ್ಯೇಕ ಕಾಯ್ದೆ ಮಾಡಿ ಈ ಜಾಗವನ್ನು ಸ್ವಾಧೀನಪಡಿಸಿಕೊಂಡಿದೆ. ಸರ್ಕಾರಿ ನಿಯಮದ ಪ್ರಕಾರ ಜಾಗವನ್ನು ಉದ್ಯಾನ ಹಾಗೂ ತೆರೆದ ಜಾಗದ ಉದ್ದೇಶಕ್ಕೆ ಮೀಸಲಿಡಲಾಗಿದ್ದು, ರಾಜ್ಯ ಸರ್ಕಾರದ ತೀರ್ಮಾನವನ್ನು ಹೈಕೋರ್ಟ್‌ ಕೂಡ ಎತ್ತಿ ಹಿಡಿದಿದೆ. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಅವರು ಪ್ರಶ್ನೆ ಮಾಡಿದ್ದಾರೆ. ಆದರೆ ಈವರೆಗೆ ಈ ಬಗೆಗಿನ ತೀರ್ಪು ಹೊರ ಬಂದಿಲ್ಲ. ಹೀಗಾಗಿ ಟಿಡಿಆರ್‌ ಅನ್ನು ಪರಿಹಾರವಾಗಿ ಯಾರಿಗೆ ನೀಡಬೇಕು ಎಂಬ ಗೊಂದಲ ಇದೆ. ಇದನ್ನು ನ್ಯಾಯಾಲಯಕ್ಕೇ ಕೇಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಇದನ್ನೂ ಓದಿ:ಕಾರ್ಖಾನೆಗಳು, ಕಟ್ಟಡ ನಿರ್ಮಾಣ ಸಂಸ್ಥೆಗಳಲ್ಲಿ ಕಾವೇರಿ ನೀರಿನ ಬಳಕೆ ನಿಲ್ಲಬೇಕಿದೆ: ರಾಘವೇಂದ್ರ

ABOUT THE AUTHOR

...view details