ಬೆಂಗಳೂರು:ಬೆಂಗಳೂರು ಹೊರವಲಯದ 10 ಗ್ರಾಮಗಳ ವ್ಯಾಪ್ತಿಯಲ್ಲಿ ಹೊಸ ಟೌನ್ಶಿಪ್ಗಳನ್ನು ನಿರ್ಮಾಣಕ್ಕೆ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಅಭಿವೃದ್ಧಿ ಯೋಜನೆ ಕೈಗೊಳ್ಳಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರಾಮನಗರ ಜಿಲ್ಲೆ ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಬೈರಮಂಗಲ, ಬನ್ನಿಗೆರೆ, ಹೊಸೂರು, ಕೆ.ಜಿ.ಗೊಲ್ಲರಪಾಳ್ಯ ಕಂಚುಗಾರನಹಳ್ಳಿ ಅರಳಾಳುಸಂದ್ರ ಕೆಂಪಯ್ಯನಪಾಳ್ಯ, ಕಂಚುಗಾರನಹಳ್ಳಿ ಕಾವಲು, ಮಂಡಲಹಳ್ಳಿ ಹಾಗೂ ಹಾರೋಹಳ್ಳಿ ತಾಲೂಕಿನ ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಗ್ರಾಮ ಭಾಗಶಃ ಸೇರಿ ಒಟ್ಟು 10 ಗ್ರಾಮಗಳ ವ್ಯಾಪ್ತಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರದ ಅಭಿವೃದ್ಧಿ ಯೋಜನೆಯನ್ನು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆಯಡಿ ಕೈಗೊಳ್ಳಲಾಗುತ್ತಿದೆ.
ಗ್ರೇಟರ್ ಬೆಂಗಳೂರು ಸಮಗ್ರ ಉಪನಗರದ ಯೋಜನೆಗಾಗಿ ಮೇಲಿನ 10 ಗ್ರಾಮಗಳಲ್ಲಿನ ಸುಮಾರು 8,943 ಎಕರೆ ಪ್ರದೇಶವನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಭೂಸ್ವಾಧೀನ ಪ್ರಕ್ರಿಯೆಗಳನ್ನು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ ಅಡಿ ಕೈಗೆತ್ತಿಕೊಳ್ಳಲು ಹಾಗೂ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳು (ಸ್ವಾಧೀನಪಡಿಸಿಕೊಂಡ ಭೂಮಿಗೆ ಬದಲಿ ನಿವೇಶನಗಳ ಹಂಚಿಕೆ ಪರಿಹಾರ) ನಿಯಮಗಳು, 2009ರಲ್ಲಿನ ಭೂ ಹಂಚಿಕೆ ಮಾದರಿಯಲ್ಲಿ ಶೇ 35-50ರಷ್ಟು ಅಭಿವೃದ್ಧಿ ಹೊಂದಿದ ಭೂಮಿಯನ್ನು ಪರಿಹಾರವಾಗಿ) ಪರಿಹಾರವನ್ನು ನೀಡುವ ಮೂಲಕ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲು ಸಂಪುಟ ಒಪ್ಪಿಗೆ ನೀಡಿದೆ.
ಪ್ರಸ್ತಾಪಿತ ಟೌನ್‌ಶಿಪ್ ಪ್ರದೇಶಗಳಲ್ಲಿನ ಸರ್ಕಾರಿ ಭೂಮಿಯನ್ನು ನಿಗದಿಪಡಿಸಲಾದ ಮಾರ್ಗಸೂಚಿ ಮೌಲ್ಯದ ಶೇ 50 ಕ್ಕಿಂತ ಹೆಚ್ಚಾಗದಂತೆ ಕನಿಷ್ಠ ಬೆಲೆಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾಯಿಸಲು ಒಪ್ಪಿಗೆ ಸೂಚಿಸಲಾಗಿದೆ. ಸಮಗ್ರ ಉಪನಗರ ಯೋಜನೆಗಳ ಅನುಷ್ಠಾನಕ್ಕಾಗಿ ಸಂಬಂಧಪಟ್ಟ ಸಕ್ರಮ ಪ್ರಾಧಿಕಾರ, ಇಲಾಖೆ ಮತ್ತು ಸಂಸ್ಥೆಗಳನ್ನೊಳಗೊಂಡಂತೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲು ಒಪ್ಪಿಗೆ ಸೂಚಿಸಲಾಗಿದೆ.
ಜಾಗತಿಕ ಟೆಂಡರ್ ಕರೆಯುವ ಮೂಲಕ ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ Work-Live-Play ಪರಿಕಲ್ಪನೆಯಲ್ಲಿ ಟೌನ್‌ಶಿಪ್ ಅನ್ನು ವಿನ್ಯಾಸಗೊಳಿಸಲು ಮತ್ತು ಯೋಜಿಸಲು ಅರ್ಹ ಸಂಸ್ಥೆಯನ್ನು ನೇಮಿಸಲು ಸಚಿವ ಸಂಪುಟ ಸಭೆ ಅನುಮತಿಸಿದೆ. ಯೋಜನೆ ಅನುಷ್ಠಾನಕ್ಕೆ ಸಂಪನ್ಮೂಲ ಕ್ರೋಢೀಕರಿಸುವ ಹಿನ್ನೆಲೆಯಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ, ಹೊಸಕೋಟೆ, ಆನೇಕಲ್, ಕನಕಪುರ, ಮಾಗಡಿ, ನೆಲಮಂಗಲ, ದೊಡ್ಡಬಳ್ಳಾಪುರ ಮತ್ತು ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರಗಳಲ್ಲಿ ಲಭ್ಯವಿರುವ ಮೊತ್ತದ ಶೇ.50ರಷ್ಟು (ಶಾಸನಬದ್ಧವಾಗಿ ಸಂಗ್ರಹಿಸುವ ಶುಲ್ಕಗಳನ್ನು ಹೊರತುಪಡಿಸಿ) ಮೊತ್ತವನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಾಲದ ರೂಪದಲ್ಲಿ ನೀಡಿ, 5 ವರ್ಷಗಳ ಅವಧಿಯಲ್ಲಿ ಸದರಿ ಮೊತ್ತವನ್ನು ಮರುಪಾವತಿಸುವ ಷರತ್ತಿಗೊಳಪಡಿಸಿ ವರ್ಗಾಯಿಸಲು ಸಂಪುಟ ಸಮ್ಮತಿಸಿದೆ.