ಬೆಂಗಳೂರು: "ವಿಜಯೇಂದ್ರ ಬಗ್ಗೆ ಯಾರು ಏನೇ ಮಾತಾಡಲಿ, ನಾನು ಸಹಿಸಿಕೊಳ್ಳುತ್ತೇನೆ. ಆದರೆ, ಪಕ್ಷ ಕಟ್ಟಿದ ಬಿ.ಎಸ್. ಯಡಿಯೂರಪ್ಪ ಅವರನ್ನು ತೇಜೋವಧೆ ಮಾಡಲಾಗುತ್ತಿದೆ, ಅವಮಾನ ಮಾಡಲಾಗುತ್ತಿದೆ. ಅದನ್ನು ನೋಡಿಕೊಂಡು ಕುಳಿತುಕೊಳ್ಳುವುದು ಕೂಡಾ ಅಪರಾಧ. ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸ ಆಗುತ್ತಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಬಿಜೆಪಿ ಭಿನ್ನಮತೀಯ ನಾಯಕರ ವಿರುದ್ಧ ಗುಡುಗಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಹಿರಿಯರಿಗೆ ಅಪಮಾನ ಮಾಡುವ ರೀತಿಯಲ್ಲಿ ನಾನು ಯಾವತ್ತೂ ನಡೆದುಕೊಂಡಿಲ್ಲ. ರಾಜ್ಯಾಧ್ಯಕ್ಷನಾಗಿ ಪ್ರಾಮಾಣಿಕವಾಗಿ ಪಕ್ಷ ಕಟ್ಟುವ ಕೆಲಸ ಮಾಡ್ತಿದ್ದೇನೆ. ನನ್ನ ಕೆಲಸದ ಬಗ್ಗೆ ಹಿರಿಯರಿಗೆ ಎಷ್ಟು ತೃಪ್ತಿ ಇದೆಯೋ ಗೊತ್ತಿಲ್ಲ, ಆದರೆ ಕಾರ್ಯಕರ್ತರಿಗೆ ತೃಪ್ತಿ ಇದೆ" ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (ETV Bharat) "ಇನ್ನು ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಫೆ.20 ರೊಳಗೆ ಮುಗಿಯಬಹುದು. ನಾನೂ ಕೂಡ ನಮ್ಮ ಕೆಲವು ನಾಯಕರ ಹೇಳಿಕೆಗಳನ್ನು ಗಮನಿಸ್ತಿದ್ದೇನೆ. ಆದರೆ ಈಗ ನಾನು ಯಾವ ಹೇಳಿಕೆಗೂ ಪ್ರತಿಕ್ರಿಯೆ ಕೊಡಲು ಹೋಗಲ್ಲ. ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿದ ಮೇಲೆ ಎಲ್ಲರ ಹೇಳಿಕೆಗೂ ಉತ್ತರ ಕೊಡ್ತೇನೆ. ನಾನೇ ಅಪರಾಧ ಮಾಡಿರುವ ರೀತಿ ಬಿಂಬಿಸುವ ಕೆಲಸ ಮಾಡ್ತಿದ್ದಾರೆ. ಅದು ತಪ್ಪು. ನಾನು ಹೈಕಮಾಂಡ್ ಗಮನಕ್ಕೂ ಎಲ್ಲವನ್ನೂ ತಂದಿದ್ದೇನೆ. ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ತಿಲ್ಲ, ಏಕಪಕ್ಷೀಯ ತಿರ್ಮಾನ ಮಾಡ್ತೇನೆ ಅಂತ ನನ್ನ ಬಗ್ಗೆ ಹೇಳುತ್ತಿರುವುದು ಸುಳ್ಳು" ಎಂದು ತಿರುಗೇಟು ನೀಡಿದರು.
"ಹೊಂದಾಣಿಕೆ ರಾಜಕೀಯ ಮಾಡಿದ್ದರೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪಾದಯಾತ್ರೆ ಮಾಡುತ್ತಿದ್ದೆನಾ? ಸಿದ್ದರಾಮಯ್ಯ ಆರ್ಭಟ ತಡೆಯಲು ಆಗದ ಸಂದರ್ಭದಲ್ಲಿ ಹೋರಾಟ ಮಾಡಿ ಒಂಟಿಕಾಲಿನಲ್ಲಿ ನಿಲ್ಲಿಸಿದ್ದೇನೆ. ಯಾವುದೋ ಎರಡು ಪ್ರತಿಭಟನೆಗೆ ಹೋಗಿಲ್ಲ ಅಂದ ಮಾತ್ರಕ್ಕೆ ಹೊಂದಾಣಿಕೆ ಅಂತ ಅರ್ಥವಲ್ಲ. ಯಾವುದೇ ಹೊಂದಾಣಿಕೆ ರಾಜಕೀಯ ನಮ್ಮ ಪಕ್ಷದಲ್ಲಿ ಮಾಡುತ್ತಿಲ್ಲ" ಎಂದು ಸ್ಪಷ್ಟಪಡಿಸಿದರು.
"ಭಿನ್ನಮತ ಶಮನಕ್ಕೆ ಯಡಿಯೂರಪ್ಪ ಮಧ್ಯಸ್ಥಿಕೆ ವಹಿಸಬೇಕೆಂದರೆ ಮೊದಲು ಅವರ ವಿರುದ್ಧ ಬೈಯುವುದನ್ನು ನಿಲ್ಲಿಸಬೇಕು" ಎಂದು ಬಸವರಾಜ ಬೊಮ್ಮಾಯಿ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
"ತಟಸ್ಥ ಬಣವನ್ನೂ ನಾನು ನೋಡಿದ್ದೇನೆ. ಅವರ ಬಗ್ಗೆ ನಾನೀಗ ಮಾತನಾಡುವುದಿಲ್ಲ. ಯಡಿಯೂರಪ್ಪ ಅವರನ್ನು ತೇಜೋವಧೆ ಮಾಡುವುದನ್ನು ನೋಡಿಕೊಂಡು ನೀವು ಸುಮ್ಮನೆ ಇರುತ್ತೀರಿ ಅಂತಾದರೆ ಸರಿಯಲ್ಲ. ಅದು ಅಕ್ಷಮ್ಯ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಯಡಿಯೂರಪ್ಪನವರ ತೇಜೋವಧೆ ಮಾಡುತ್ತಿರುವವರನ್ನು ತಡೆಯುವ ಕೆಲಸವನ್ನು ಪಕ್ಷದ ಹಿರಿಯರು ಮಾಡಲಿ" ಎಂದ ವಿಜಯೇಂದ್ರ, ಯಡಿಯೂರಪ್ಪನವರ ತೇಜೋವಧೆಗೆ ಹೈಕಮಾಂಡ್ ಬೆಂಬಲ, ಸಂತೋಷ್ ಬೆಂಬಲ ಇದೆ ಎಂಬುದೆಲ್ಲಾ ಸತ್ಯಕ್ಕೆ ದೂರ. ಇದಕ್ಕೆ ಹೈಕಮಾಂಡ್ ನಾಯಕರ ಯಾವುದೇ ಬೆಂಬಲ ಇಲ್ಲ" ಎಂದು ಸ್ಪಷ್ಟಪಡಿಸಿದರು.
ತಮ್ಮ ಕಾರ್ಯವೈಖರಿಗೆ ಅಶೋಕ್ ಆಕ್ಷೇಪಿಸಿದ್ದಕ್ಕೆ "ಬೆಂಗಳೂರು ಶಾಸಕರ ಸಭೆ ಕರಿತೇನೆ. ಆಗ ಇವೆಲ್ಲ ಚರ್ಚೆ ಮಾಡುತ್ತೇವೆ" ಎಂದು ಹೇಳಿದರು.
ಶ್ರೀರಾಮುಲು ಅವರಿಗೆ ಟಕ್ಕರ್ ಕೊಟ್ಟ ವಿಜಯೇಂದ್ರ : "ನನಗೆ ಅನುಭವ ಇಲ್ಲ ಎಂದು ಶ್ರೀರಾಮುಲು ಹೇಳಿದ್ದಾರೆ. ರಾಜ್ಯಾಧ್ಯಕ್ಷನಾಗಿ ನನಗೆ ಅವರಷ್ಟು ಅನುಭವ ಇಲ್ಲದಿರಬಹುದು. ಆದರೆ ಪಕ್ಷದ ಕಾರ್ಯಕರ್ತನಾಗಿ ನನಗೆ ಸಾಕಷ್ಟು ಅನುಭವ ಇದೆ. ನಾನು ರಾಜ್ಯಾಧ್ಯಕ್ಷನಾಗಿ ರಾಜ್ಯ ಪ್ರವಾಸದ ವೇಳೆ ಕಾರ್ಯಕರ್ತರು ಪ್ರೀತಿಯಿಂದ ವಿಜಯಣ್ಣ ಎಂದು ಕರೆಯುತ್ತಾರೆ. ಕಾರ್ಯಕರ್ತರಿಗೆ ನನ್ನ ಬಗ್ಗೆ ಪ್ರೀತಿ, ಸಂತೋಷ, ತೃಪ್ತಿ ಇದೆ" ಎಂದರು.
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದೌರ್ಜನ್ಯಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್ : "ಜನರ ರಕ್ಷಣೆಗೆ ಬರಬೇಕಾದ ರಾಜ್ಯ ಸರ್ಕಾರ ದೌರ್ಜನ್ಯ ಎಸಗುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಸಂಜೆ 5 ಗಂಟೆ ತನಕ ಹೋಗಲು ಗ್ರೀನ್ ಸಿಗ್ನಲ್ ಕೊಟ್ಟಿದೆ. ಬೆಳಗ್ಗೆ 10ರಿಂದ 5ಗಂಟೆವರೆಗೆ ಹೋಗಿ ಎಂಬ ಮಾತನ್ನು ರಾಜ್ಯ ಸರ್ಕಾರ ಹೇಳುತ್ತಿರುವುದು ದುರ್ದೈವ" ಎಂದು ಟೀಕಿಸಿದರು.
"ಒಂದು ಕಡೆ ತಮ್ಮ ಗ್ಯಾರಂಟಿಗಳಿಂದ ರಾಜ್ಯದಲ್ಲಿ ಜನರು ಸಮೃದ್ಧರಾಗಿದ್ದಾರೆ; ಆಲ್ ಈಸ್ ವೆಲ್ ಎಂದು ಹೇಳಿಕೊಳ್ಳುತ್ತಾರೆ. ಮತ್ತೊಂದು ಕಡೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದೌರ್ಜನ್ಯ ಮತ್ತು ಭರಾಟೆಯಿಂದ ರಾಜ್ಯದಲ್ಲಿ ಬಡವರು, ಮಹಿಳೆಯರು, ಕೂಲಿ ಕಾರ್ಮಿಕರು ತತ್ತರಿಸಿ ಹೋಗಿದ್ದಾರೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವ್ಯೂಹಕ್ಕೆ ಬಡವರು ಸಿಲುಕಿದ್ದಾರೆ. ರಾಜ್ಯ ಸರಕಾರವು ದೌರ್ಜನ್ಯಕ್ಕೆ ಅವಕಾಶ ಕೊಡುವುದನ್ನು ಬದಿಗಿಟ್ಟು ಮುಗ್ಧ ಬಡಜನರ- ರೈತರ ರಕ್ಷಣೆಗೆ ಧಾವಿಸಬೇಕು" ಎಂದು ಆಗ್ರಹಿಸಿದರು.
"ರಾಜ್ಯದಲ್ಲಿ ಅನುದಾನ ಇಲ್ಲದೇ ಶಾಸಕರು ಅಭಿವೃದ್ಧಿರಹಿತ ಕ್ಷೇತ್ರದೊಂದಿಗೆ ಕೈಕಟ್ಟಿ ಕುಳಿತಿರುವ ದಾರುಣ ಪರಿಸ್ಥಿತಿ ಇದೆ. ಸರಕಾರ ರೈತರ ಗೋಳು ಕೇಳುತ್ತಿಲ್ಲ; ಹಗಲು ದರೋಡೆ, ಕೊಲೆ, ಅತ್ಯಾಚಾರ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿದೆ. ಇದಲ್ಲದೇ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ" ಎಂದು ಆರೋಪಿಸಿದರು.
"ರಾಜ್ಯದಲ್ಲಿ ಚುನಾಯಿತ ಸರ್ಕಾರ, ಮುಖ್ಯಮಂತ್ರಿಗಳು ಇದ್ದಾರಾ ಎಂದು ಜನರು ಪ್ರಶ್ನಿಸುವಂತಾಗಿದೆ. ಸರ್ಕಾರ ರಾಜ್ಯದ ಅಭಿವೃದ್ಧಿ ಸೇರಿ ಎಲ್ಲವನ್ನೂ ಮರೆತಿದೆ. ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡಿದೆ" ಎಂದರು.
"ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಯ ಕುರಿತು ಬಹಳಷ್ಟು ಚರ್ಚೆ ಆಗುತ್ತಿದೆ. ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಕ್ರೋ ಫೈನಾನ್ಸ್ ಹಾವಳಿ ಮತ್ತು ವಸೂಲಾತಿ ದೌರ್ಜನ್ಯದಿಂದ ಭಯಭೀತರಾಗಿ ಹಣ ಮರುಪಾವತಿ ಮಾಡಲು ಸಾಧ್ಯವಾಗದೆ ಪ್ರಾಣ ಕಳಕೊಳ್ಳುತ್ತಿದ್ದಾರೆ" ಎಂದು ಬೇಸರ ವ್ಯಕ್ತಪಡಿಸಿದರು.
"ದೆಹಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಏರುವ ವಿಶ್ವಾಸವಿದೆ. ದೆಹಲಿ ರಾಜ್ಯದ ಚುನಾವಣೆ ನಿನ್ನೆ ನಡೆದಿದೆ. 9-10 ಸಮೀಕ್ಷೆಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದಂತೆ 27 ವರ್ಷಗಳ ನಂತರ ದೆಹಲಿ ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಗ್ಯಾರಂಟಿಗಳ ಭ್ರಮೆಯಲ್ಲಿದ್ದ ಆಮ್ ಆದ್ಮಿ ಪಾರ್ಟಿಗೆ ತಕ್ಕ ಪಾಠವನ್ನು ಆ ರಾಜ್ಯದ ಜನರು ಕಲಿಸುತ್ತಾರೆ. ಭ್ರಷ್ಟಾಚಾರದ ವಿರುದ್ಧ ಆಂದೋಲನ ಮಾಡಿ, ರಾಜ್ಯದ ಚುಕ್ಕಾಣಿ ಹಿಡಿದ ಆಮ್ ಆದ್ಮಿ ಪಾರ್ಟಿಗೆ ತಕ್ಕ ಉತ್ತರವನ್ನು ನಿನ್ನೆ ನೀಡಿದ್ದಾರೆ. ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ವಿಶ್ವಾಸ ನಮಗಿದೆ" ಎಂದು ಹೇಳಿದರು.
ಕೇಂದ್ರ ಸರ್ಕಾರದ ಅತ್ಯುತ್ತಮ ಬಜೆಟ್ : "ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅತ್ಯುತ್ತಮ ಬಜೆಟ್ ಅನ್ನು ಮಂಡನೆ ಮಾಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಕನಸು ನನಸಾಗುವ ನಿಟ್ಟಿನಲ್ಲಿ ಅಭಿವೃದ್ಧಿಗೆ ಪೂರಕವಾದ, ಬಡವರು, ರೈತರು, ಯುವಕರು, ಮಹಿಳೆಯರ ಪರವಾಗಿ ಒಂದು ಅತ್ಯುತ್ತಮ ಬಜೆಟ್ ಅನ್ನು ನೀಡಿದ್ದಾರೆ" ಎಂದು ಮೆಚ್ಚುಗೆ ಸೂಚಿಸಿದರು.
"12 ಲಕ್ಷದವರೆಗೆ ಆದಾಯ ತೆರಿಗೆ ಕಟ್ಟುವಂತಿಲ್ಲ ಎಂಬ ನಿರ್ಧಾರದಿಂದ ಮಧ್ಯಮ ವರ್ಗದವರಿಗೆ ಬಹಳಷ್ಟು ಅನುಕೂಲವಾಗಿದೆ; ಜನರ ಬಹುವರ್ಷಗಳ ನಿರೀಕ್ಷೆಗೆ ತಕ್ಕಂತೆ ಬಜೆಟ್ ಮಂಡಿಸಿದ್ದು, ಪ್ರತಿಯೊಬ್ಬರೂ ಸಂತಸ ಪಡುವ ವಿಚಾರ. ಸಿದ್ದರಾಮಯ್ಯನವರಿಂದ ಕೇಂದ್ರದ ಬಜೆಟ್ ಬಗ್ಗೆ ಒಳ್ಳೆಯ ಮಾತು ಕೇಳಲು ಸಾಧ್ಯವಿಲ್ಲ; ಸಹಜವಾಗಿ ಅವರು ಟೀಕೆಗಳನ್ನು ಮಾಡಿದ್ದಾರೆ" ಎಂದರು.
ಇದನ್ನೂ ಓದಿ:ಪಕ್ಷದೊಳಗಿನ ಬಣ ಬಡಿದಾಟಕ್ಕೆ ಆರ್. ಅಶೋಕ್ ಅಸಮಾಧಾನ