ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ತಡರಾತ್ರಿ ಭೀಕರ ಕೊಲೆ ಪ್ರಕರಣ ನಡೆದಿದೆ. ಯುವಕನನ್ನು ಕಲ್ಲು ಎತ್ತಿ ಹಾಕಿ ಕೊಲೆಗೈದ ದುಷ್ಕರ್ಮಿಗಳು, ಶವಕ್ಕೆ ಬೆಂಕಿ ಹಚ್ಚಿದ್ದಾರೆ. ಕಾರವಾರ ರಸ್ತೆಯ ಎಂಟಿಎಸ್ ಕಾಲೊನಿಯ ಪಾಳು ಜಾಗದಲ್ಲಿ ಘಟನೆ ನಡೆದಿದೆ. ಕೊಲೆಯಾದ ಯುವಕನನ್ನು ಮಾರುತಿನಗರದ ನಿವಾಸಿ ವಿಜಯ ಬಸವ (25) ಎಂದು ಗುರುತಿಸಲಾಗಿದೆ. ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಪ್ರತಿಕ್ರಿಯಿಸಿದ ಅವರು, "ಕೊಲೆಯಾದ ಯುವಕ ವಿಜಯ ಬಸವ ಎಂದು ತಿಳಿದುಬಂದಿದೆ. ಮೊಬೈಲ್ ಸರ್ವಿಸ್ ಕಂಪನಿಯ ಟೀಮ್ ಹೆಡ್ ಆಗಿ ಕೆಲಸ ಮಾಡುತ್ತಿದ್ದ. ಆತನ ಬಗ್ಗೆ ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕಲಾಗಿದೆ. ತನಿಖೆಯ ನಂತರ ಕಾರಣ ತಿಳಿದು ಬರಲಿದೆ" ಎಂದು ತಿಳಿಸಿದರು. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.