ಚಾಮರಾಜನಗರ:ಬೈಕ್ ಕಳ್ಳತನ ಮಾಡಿ ಹೊರ ಜಿಲ್ಲೆಗಳಿಗೆ ಮಾರಾಟ ಮಾಡುತ್ತಿದ್ದ ಸಹೋದರರನ್ನು ಬಂಧಿಸಿದ ರಾಮಪುರ ಪೊಲೀಸರು, ನಾಲ್ಕು ಬೈಕ್ ಹಾಗೂ 13 ಸಾವಿರ ರೂ. ನಗದು ವಶ ಪಡಿಸಿಕೊಂಡಿದ್ದಾರೆ. ನಂದೀಶ್ ಹಾಗೂ ಗಿರೀಶ್ ಬಂಧಿತರು.
ಕೆಲ ದಿನಗಳ ಹಿಂದೆ ಹನೂರು ತಾಲೂಕಿನ ಕೆ ಗುಂಡಾಪುರ ಗ್ರಾಮದ ಬಳಿ ವ್ಯಕ್ತಿ ಒಬ್ಬ ನಕಲಿ ಕೀ ಬಳಸಿ ಬೈಕ್ ಕಳವು ಮಾಡಲು ಯತ್ನಿಸುತ್ತಿದ್ದಾಗ ಬೈಕ್ ಮಾಲೀಕ ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ಕಳ್ಳನನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ 112 ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಅಪರಾಧ ವಿಭಾಗದ ಸಬ್ಇನ್ಸ್ಪೆಕ್ಟರ್ ಲೋಕೇಶ್ ಅವರು ಸಿಕ್ಕಿಬಿದ್ದ ಆರೋಪಿ ನಂದೀಶ್ನನ್ನು ವಿಚಾರಣೆಗೆ ಒಳಪಡಿಸಿದಾಗ, ತನ್ನ ಸಹೋದರ ಗಿರೀಶ್ ಜೊತೆ ಸೇರಿ ಬೈಕ್ ಕಳ್ಳತನ ಮಾಡಿ ಹೊರ ಜಿಲ್ಲೆಗಳಿಗೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.