ಹುಬ್ಬಳ್ಳಿ: ಹುಟ್ಟುವಾಗಲೇ ಬ್ರೇನ್ ಟ್ಯೂಮರ್ (ಮೆದುಳಿನ ಗಡ್ಡೆ) ಹಾಗೂ ಅಪರೂಪದ ಎನ್.ಎಫ್.1 ನೂನನ್ ಸಿಂಡ್ರೋಮ್ (ಅನುವಂಶಿಕ ಕಾಯಿಲೆ) ನಿಂದ ಬಳಲುತ್ತಿದ್ದ 7 ತಿಂಗಳ ಗಂಡು ಮಗುವಿ ಕಾಯಿಲೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಗುಣಪಡಿಸುವಲ್ಲಿ ಹುಬ್ಬಳ್ಳಿಯ ಬಾಲಾಜಿ ನರರೋಗ ಆಸ್ಪತ್ರೆಯ ತಜ್ಞ ವೈದ್ಯರು ಯಶಸ್ವಿಯಾಗಿದ್ದಾರೆ.
ಧಾರವಾಡ ನಿವಾಸಿಯಾದ ದಂಪತಿಗೆ ಜನಿಸಿದ ಈ ಮಗುವಿಗೆ ಹುಟ್ಟಿದಾಗಲೇ ದೊಡ್ಡದಾದ ತಲೆ, ಮೂಗು ಸೋರುವಿಕೆ, ಕಿವಿ ಕೇಳದಿರುವಿಕೆ ಸಮಸ್ಯೆಯಿತ್ತು. ಅಲ್ಲದೇ ಕಣ್ಣುಗಳು ಹೊರಗೆ ಚಾಚಿಕೊಂಡಿದ್ದರಿಂದ ಮಲಗಿದಾಗಲೂ ಮಗು ಕಣ್ಣು ಬಿಟ್ಟುಕೊಂಡೇ ಮಲಗಿರುವಂತೆ ಭಾಸವಾಗುತ್ತಿತ್ತು. ಅಷ್ಟೇ ಅಲ್ಲ, ಈ ಮಗುವಿಗೆ ಮೂರ್ಚೆ (ಫಿಟ್ಸ್), ಉಸಿರಾಟ ತೊಂದರೆ ಸಹ ಕಾಡುತ್ತಿತ್ತು.
ಇದರಿಂದ ಆತಂಕಕ್ಕೀಡಾದ ಪೋಷಕರು ಬೇರೆ ಬೇರೆ ಕಡೆ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಿರಲಿಲ್ಲ. ಚಿಕಿತ್ಸೆಯ ಒಂದೆರೆಡು ದಿನದ ನಂತರ ಮತ್ತೆ ಸಮಸ್ಯೆ ಮರುಕಳಿಸುತ್ತಿತ್ತು. ಕೊನೆಗೆ ವೈದ್ಯರು ಎಂ.ಆರ್.ಐ ಸ್ಕ್ಯಾನ್ ಮಾಡಿಸಿದಾಗ ಮೆದುಳಿನಲ್ಲಿ ಗಡ್ಡೆ ಹಾಗೂ ನೀರು ತುಂಬಿಕೊಂಡಿರುವುದು ಬೆಳಕಿಗೆ ಬಂತು. ಕೂಡಲೇ ಶ್ರೀ ಬಾಲಾಜಿ ಆಸ್ಪತ್ರೆಗೆ ಬಂದ ಪೋಷಕರು ಆಸ್ಪತ್ರೆಯ ಚೇರ್ಮನ್ ಹಾಗೂ ಖ್ಯಾತ ನರರೋಗ ತಜ್ಞರಾದ ಡಾ. ಕ್ರಾಂತಿಕಿರಣ ಅವರನ್ನು ಭೇಟಿ ಮಾಡಿದರು. ಆಗ ಮಗುವಿನ ಹಿಂದಿನ ಎಲ್ಲ ವೈದ್ಯಕೀಯ ವರದಿಗಳನ್ನು ಪರಿಶೀಲಿಸಿ ತಡ ಮಾಡದೇ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಮಗುವಿನ ದೇಹ ಬೆಳವಣಿಗೆ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದರು.
ಮಗುವಿನ ಅನುವಂಶಿಕತೆ ಪರೀಕ್ಷೆ ಮಾಡಿದಾಗ ಮಗು ಅಪರೂಪದ ಎನ್.ಎಫ್.1 ನೂನನ್ ಸಿಂಡ್ರೋಮ್ನಿಂದ ಬಳಲುತ್ತಿರುವುದು ಹಾಗೂ ಎಂ.ಆರ್.ಐ ವರದಿಯಲ್ಲಿ ಮಗುವಿನ ಎಡಭಾಗದ ಮೆದುಳಿನಲ್ಲಿ ಟ್ಯೂಮರ್ (ಮೆದುಳಿನ ಗಡ್ಡೆ) ಇರುವುದು ಪತ್ತೆಯಾಯಿತು. ಕೇವಲ 7 ತಿಂಗಳ ಮಗುವಾಗಿದ್ದರಿಂದ ಶಸ್ತ್ರಚಿಕಿತ್ಸೆ ಅಷ್ಟು ಸುಲಭವಾಗಿರಲಿಲ್ಲ. ಮಗುವಿನ ಆರೋಗ್ಯದ ಬಗ್ಗೆ ವೈದ್ಯರು ತೀವ್ರ ನಿಗಾ ವಹಿಸಿದ ವೈದ್ಯರು ಚಿಕಿತ್ಸೆಗೆ ದಾಖಲಾದ ಒಂದೆರೆಡು ದಿನಗಳಲ್ಲಿಯೇ ಅತ್ಯಂತ ಕ್ಲಿಷ್ಟಕರವಾದ ಹಾಗೂ ಸತತ 4 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಮೆದುಳಿನ ಗಡ್ಡೆ ನಿವಾರಿಸಿ ಮಗು ಚೇತರಿಸಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮಗುವಿನ ಶಸ್ತ್ರಚಿಕಿತ್ಸೆ ಕುರಿತು ಚೇರ್ಮನ್ ಡಾ. ಕ್ರಾಂತಿಕಿರಣ ಅವರು ಮಾತನಾಡಿ, ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆತಂದಾಗ ಮಗುವಿನಲ್ಲಿನ ಅಸಹಜ ಬೆಳವಣಿಗೆ ಬಗ್ಗೆ ಅನುವಂಶಿಕತೆ ಪರೀಕ್ಷೆ ಮಾಡಿ ಮಗುವಿನ ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸಲಾಯಿತು. ಎನ್.ಎಫ್.1 ಸಿಂಡ್ರೋಮ್ ಜೊತೆಗೆ ಮಗುವಿಗೆ ಬ್ರೇನ್ ಟ್ಯೂಮರ್ ಇದ್ದಿದ್ದರಿಂದ ಪದೇ ಪದೇ ಮೂರ್ಚೆ (ಫಿಟ್ಸ್) ಹೋಗುತ್ತಿತ್ತು. ಕೂಡಲೇ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಿ ತೀವ್ರ ನಿಗಾ ವಹಿಸಲಾಯಿತು ಎಂದರು.
ಸತತ 4 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಮಿದುಳಿನ ಗಡ್ಡೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದು, ಶಸ್ತ್ರಚಿಕಿತ್ಸೆ ಬಳಿಕ ಮಗುವನ್ನು ಅತ್ಯಂತ ಜಾಗರೂಕತೆಯಿಂದ ಆರೈಕೆ ಮಾಡಿ ಚೇತರಿಕೆ ಮಾಡಲಾಗಿದೆ. ಎನ್.ಎಫ್.1 ನೂನನ್ ಸಿಂಡ್ರೋಮ್ ಮತ್ತು ಈ ರೀತಿಯ ಮಿದುಳಿನ ಗಡ್ಡೆ ಕಂಡುಬರುವುದು ಅತ್ಯಂತ ವಿರಳವಾಗಿದ್ದು, ಈ ಕುರಿತು ವೈದ್ಯಕೀಯ ವಿಮರ್ಶೆ (ಲಿಟರೇಚರ್ ರಿವ್ಯೂ) ಮಾಡಿದಾಗ ವಿಶ್ವದಲ್ಲಿ ಕೆಲವೇ ಕೆಲವು ಪ್ರಕರಣ ವರದಿಯಾಗಿವೆ ಎಂದು ತಿಳಿಸಿದರು.
ಶಸ್ತ್ರಚಿಕಿತ್ಸೆ ಬಳಿಕ ಮಗುವಿನ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದು, ದೊಡ್ಡದಾಗಿದ್ದ ತಲೆ ಸಾಮಾನ್ಯ ಸ್ಥಿತಿಗೆ ಬಂದಿದೆ, ಕಣ್ಣುಗಳ ಊತ ಕಡಿಮೆಯಾಗಿದ್ದು, ಮಗುವಿನಲ್ಲಿ ಮೂರ್ಚೆ ರೋಗ (ಫಿಟ್ಸ್) ಮಾಯವಾಗಿದೆ. ಮಗುವಿನ ಸಹಜ ಆರೋಗ್ಯ ಸ್ಥಿತಿಗೆ ಪೋಷಕರೂ ಸಹ ಸಂತಸಗೊಂಡಿದ್ದು, ಇದೀಗ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಗೆ ಮರಳಿದ್ದಾರೆ ಎಂದು ಹೇಳಿದರು. ಶಸ್ತ್ರಚಿಕಿತ್ಸಾ ತಂಡದಲ್ಲಿ ಡಾ. ಕ್ರಾಂತಿಕಿರಣ, ಡಾ. ಇತಿ ಸಿಂಗ್ ಪರಮಾರ್, ಡಾ. ಪ್ರಕಾಶ ವಾರಿ, ಡಾ. ಭೀಮಾಶಂಕರ ಸೇರಿದಂತೆ ಆಸ್ಪತ್ರೆಯ ಇತರೆ ವೈದ್ಯಕೀಯ ಸಿಬ್ಬಂದಿ ಇದ್ದರು.
ಮಗುವಿಗೆ ಮರು ಜನ್ಮ ನೀಡಿದ್ದಾರೆ: ಮಗು ಹುಟ್ಟಿದಾಗ ಅದರ ದೇಹ ಹಾಗೂ ಮುಖ ಲಕ್ಷಣ ನೋಡಿ ಆತಂಕಗೊಂಡಿದ್ದೆವು. ಆದರೆ, ದಿನ ಕಳೆದಂತೆ ಸರಿ ಹೋಗಬಹುದೆಂದು ಸುಮ್ಮನಾಗಿದ್ದೆವು. ಹಲವಾರು ಕಡೆ ಚಿಕಿತ್ಸೆ ಕೊಡಿಸಿದರೂ ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರಿಂದ ಮಗುವನ್ನು ಬಾಲಾಜಿ ಆಸ್ಪತ್ರೆಗೆ ಕರೆತಂದು ಡಾ. ಕ್ರಾಂತಿಕಿರಣ ಅವರಲ್ಲಿ ತೋರಿಸಿದ್ದೆವು. ಬಳಿಕ ಮಗುವಿಗೆ ಪುನರ್ಜನ್ಮ ದೊರೆತಂತಾಗಿದೆ. ಇದೀಗ ಮಗುವಿನ ಮುಖ ಬದಲಾವಣೆ, ಆರೋಗ್ಯದಲ್ಲಿನ ಸುಧಾರಣೆಯಿಂದ ನಮ್ಮ ಕುಟುಂಬದಲ್ಲಿ ಸಂತೋಷ ಇಮ್ಮಡಿಗೊಂಡಿದೆ ಎಂದು ಮಗುವಿನ ಪೋಷಕರು ಹರ್ಷ ವ್ಯಕ್ತಪಡಿಸಿದರು.
ಓದಿ:ಏನಿದು ಸ್ತನ ಕ್ಯಾನ್ಸರ್? ಇದರ ಮೂಲ ಯಾವುದು?: ಯುವ ಜನತೆಯಲ್ಲಿ ಹೆಚ್ಚುತ್ತಿರುವ ಈ ಮಹಾಮಾರಿ ಬಗ್ಗೆ ಬೇಡ ನಿರ್ಲಕ್ಷ್ಯ! - Know about Breast Cancer