ಮಂಗಳೂರು: ಸುಡುಮದ್ದು ತಯಾರಿಸುವ ಘಟಕದಲ್ಲಿ ಸ್ಫೋಟ ಸಂಭವಿಸಿ, ಮೂವರು ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಇಂದು ಸಂಜೆ ಈ ದುರಂತ ನಡೆದಿದೆ. ಮೂವರು ಸಾವನ್ನಪ್ಪಿದ್ದರೆ ಸ್ಫೋಟದ ತೀವ್ರತೆಗೆ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕೇಡಿ ಸಮೀಪದ ಗೊಳಿಯಂಗಡಿ ಬಳಿ ಕಲ್ಲಾಜೆ ಎಂಬಲ್ಲಿ ಬಶೀರ್ ಎಂಬವರ ಸುಡುಮದ್ದು ತಯಾರಿಕ ಘಟಕ ಇದೆ. ಭಾನುವಾರ ಸಂಜೆ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟಕ ತಯಾರಿಸುತ್ತಿರುವ ವೇಳೆ ಅಕಸ್ಮಿಕವಾಗಿ ಬೆಂಕಿಯ ಕಿಡಿ ತಗುಲಿದೆ. ಇದರಿಂದ ಸ್ಫೋಟ ಸಂಭವಿಸಿದ್ದು, ಇದರ ತೀವ್ರತೆಗೆ ದೇಹಗಳು ಛಿದ್ರಗೊಂಡು ದೂರಕ್ಕೆ ತೂರಿಬಿದ್ದಿವೆ.