ಕರ್ನಾಟಕ

karnataka

ETV Bharat / state

ಸೈಟ್ ವಾಪಸ್ ನಿರ್ಧಾರ ತಪ್ಪು ಒಪ್ಪಿಕೊಂಡಂತೆ, ಕೂಡಲೇ ಸಿಎಂ ರಾಜೀನಾಮೆ ನೀಡಬೇಕು: ವಿಜಯೇಂದ್ರ - Muda Case - MUDA CASE

ಮುಡಾ ಸೈಟ್ ವಾಪಸ್ ನೀಡುವ ನಿರ್ಧಾರ ಮಾಡಿದ್ದಾರೆಂದರೆ ಅದು ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಎಂದರ್ಥ. ಆದ್ದರಿಂದ ಸಿಎಂ ಸಿದ್ದರಾಮಯ್ಯ ತಡಮಾಡದೇ ರಾಜೀನಾಮೆ ನೀಡಬೇಕೆಂದು ಬಿಜೆಪಿ ಒತ್ತಾಯಿಸಿದೆ.

ವಿಜಯೇಂದ್ರ
ವಿಜಯೇಂದ್ರ (ETV Bharat)

By ETV Bharat Karnataka Team

Published : Oct 1, 2024, 1:26 PM IST

ಬೆಂಗಳೂರು:ಸಿಎಂ ಕುಟುಂಬಕ್ಕೆ ಹಂಚಿಕೆಯಾದ ಮುಡಾ ಸೈಟ್ ವಾಪಸ್​ ಕೊಡುವ ನಿರ್ಣಯ ಮಾಡಿದ್ದಾರೆ ಎಂದರೆ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದೇ ಅರ್ಥ. ಕೂಡಲೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು, ಅದಕ್ಕೂ ಮುನ್ನ ರಾಜ್ಯಪಾಲರ ಬಳಿ ಕ್ಷಮಾಪಣೆ ಕೋರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗ್ರಹಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಜಯೇಂದ್ರ, 2011ರಲ್ಲಿ ಅಂದಿನ ಸಿಎಂ ಯಡಿಯೂರಪ್ಪ ಮೇಲೆ ಆರೋಪ ಬಂದಾಗ, ಪ್ರತಿಪಕ್ಷ ಸ್ಥಾನದಲ್ಲಿ ಸಿದ್ದರಾಮಯ್ಯ ಮಾತಾಡಿದ್ದ ವಿಡಿಯೋ ಪ್ರದರ್ಶಿಸಿ ತಿರುಗೇಟು ನೀಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (ETV Bharat)

ನಾವು ಹೋರಾಟ ಮಾಡಿದರೂ ತಪ್ಪು ಮಾಡಿಲ್ಲ ಎಂದಿದ್ದರು:ಮುಖ್ಯಮಂತ್ರಿ ಮತ್ತು ರಾಜ್ಯದಲ್ಲಿ ಆಗುತ್ತಿರುವ ಭ್ರಷ್ಟಾಚಾರಗಳ ವಿರುದ್ಧ ಅನೇಕ ಹೋರಾಟ ಕೈಗೆತ್ತಿಕೊಂಡಿದ್ದೆವು. ಮುಡಾ, ವಾಲ್ಮೀಕಿ ಹಗರಣ, ಎಸ್ಸಿಪಿ ಟಿಎಸ್ಪಿ ಹಣ ದುರುಪಯೋಗದ ಬಗ್ಗೆ ಹೋರಾಟ ಮಾಡಿದ್ದೆವು, ಮುಖ್ಯಮಂತ್ರಿಗಳು ನಮ್ಮ ಹೋರಾಟಕ್ಕೆ ಕಿಂಚಿತ್ತೂ ಬೆಲೆ ಕೊಡದೇ, ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ ಅಂತಾ ಬಡಾಯಿ ಹೊಡೆಯುತ್ತಿದ್ದರು. ಭ್ರಷ್ಟಾಚಾರ ರಹಿತ ಆಡಳಿತ ಅಂತಾ ಹೇಳಿಕೊಂಡೇ 187 ಕೋಟಿ ವಾಲ್ಮೀಕಿ ಹಗರಣ ಹಾಗೂ ಮೈಸೂರಿನ ಮುಡಾ ಹಗರಣ ನಡೆಸಿದ್ದಾರೆ. ಸಿಎಂ ಧರ್ಮ ಪತ್ನಿಗೆ ಅಕ್ರಮವಾಗಿ ಬಂದಿರುವ ಸೈಟುಗಳು ಒಂದು ಕಡೆ, ಮತ್ತೊಂದೆಡೆ ಅವರಿಗೆ ಬೇಕಾದವರಿಗೆ ಕೊಟ್ಟಿದ್ದಾರೆ. ಮೊದಲ ಹಂತದಲ್ಲಿ ನಾವು ಮೈಸೂರಿಗೆ ಚಲೋ ಮಾಡಿದ್ದೆವು. ಇದರ ಪರಿಣಾಮ ಸಾಮಾಜಿಕ ಹೋರಾಟಗಾರರು ದೂರನ್ನು ಕೊಟ್ಟರು ಎಂದರು.

ಸಿಎಂ ತಪ್ಪು ಒಪ್ಪಿಕೊಳ್ಳುವ ಸಂದರ್ಭ ಬರುತ್ತೆ ಅಂತಾ ಹೇಳಿದ್ದೆ:ಮುಖ್ಯಮಂತ್ರಿಗಳು ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಸಂದರ್ಭ ಬರುತ್ತದೆ ಅಂತಾ ಹೇಳಿದ್ದೆ. ನಿನ್ನೆ ರಾತ್ರಿ ಬಹಳ ಮಹತ್ತರವಾದ ಬೆಳವಣಿಗೆ ಆಗಿದೆ. ಸೈಟ್ ವಾಪಸ್ ನೀಡುವ ಕುರಿತು ಸಿಎಂ ಪತ್ನಿ ಅವರೇ ಪತ್ರ ಬರೆದಿದ್ದಾರೋ ಅಥವಾ ಬಲವಂತವಾಗಿ ಬರೆಸಿದ್ದಾರೋ ಗೊತ್ತಿಲ್ಲ. ಯಾವ ಮುಖ್ಯಮಂತ್ರಿಗಳು ನಾನು ಜಗ್ಗಲ್ಲ ಬಗ್ಗಲ್ಲ ಅಂತಿದ್ದರೋ 62 ಕೋಟಿ ಕೊಟ್ಟರೆ ಸೈಟ್ ವಾಪಸ್ ಕೊಡ್ತೀವಿ ಅಂತಿದ್ದರೋ ಅವರೇ ಈಗ ಸೈಟ್ ವಾಪಸ್​ ಕೊಡುವ ನಿರ್ಣಯ ಮಾಡಿದ್ದಾರೆ. ಅಂದರೆ ಕಾನೂನಿನ ಕುಣಿಕೆಯಿಂದ ಪಾರಾಗಬೇಕು, ರಾಜಕೀಯವಾಗಿಯೂ ಸಿಂಪಥಿ ತೆಗೆದುಕೊಳ್ಳಬೇಕು ಎನ್ನುವ ಉದ್ದೇಶ ಸ್ಪಷ್ಟವಾಗಿದೆ. ಸೈಟ್ ವಾಪಸ್ ಕೊಡ್ತಿರೋದು ಪೊಲಿಟಿಕಲ್ ಡ್ರಾಮಾ ಎಂದು ಟೀಕಿಸಿದರು.

ರಾಜ್ಯಪಾಲರ ಬಳಿ ಕ್ಷಮಾಪಣೆ ಕೇಳಿ:ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಮುನ್ನ ರಾಜ್ಯಪಾಲರ ಬಳಿ ಕ್ಷಮಾಪಣೆ ಕೋರಬೇಕು. ಸ್ನೇಹಮಹಿ ಕೃಷ್ಣನ ವಿರುದ್ಧವೂ ದೂರು ದಾಖಲಿಸುವ ಮೂಲಕ ಸಿಎಂ ಟೀಮ್​ನಿಂದ ಬೆದರಿಕೆ ಹಾಕುವ ಕೆಲಸ ಮಾಡಿದ್ದಾರೆ. ಹೀಗಾಗಿ ಸ್ನೇಹಮಹಿ ಕೃಷ್ಣಗೂ ಪೊಲೀಸರು ಸೂಕ್ತ ಭದ್ರತೆ ಕೊಡಬೇಕು. ಡಿಕೆ ಶಿವಕುಮಾರ್, ಪರಮೇಶ್ವರ್ ಅವರು ಇನ್ಮುಂದೆ ಸಮರ್ಥನೆ ಮಾಡಿಕೊಳ್ಳೋಕೆ ಸಾಧ್ಯವಿಲ್ಲ. ಆದಷ್ಟು ಬೇಗ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ಒಳ್ಳೆಯದು ಎಂದು ಚರ್ಚೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೂಡ ಕುಮ್ಮಕ್ಕು ಕೊಡ್ತಿದೆ. ನಮ್ಮೆಲ್ಲರ ಹೋರಾಟದ ಪರಿಣಾಮ ಮುಖ್ಯಮಂತ್ರಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇನ್ನು ತಡ ಮಾಡದೇ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ನಮಗಿಂತ ಕಾಂಗ್ರೆಸ್​​ನಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕೆಂಬ ಡಿಮ್ಯಾಂಡ್ ಇದೆ. ಹೀಗಾಗಿ ಸಿದ್ದರಾಮಯ್ಯ ಯಾವ ಕ್ಷಣದಲ್ಲಾದರೂ ರಾಜೀನಾಮೆ ಕೊಡಬಹುದು ಎಂದರು.

ಇದನ್ನೂ ಓದಿ: ಸಿಎಂ ಪತ್ನಿಯ ಪತ್ರ ಕಚೇರಿ ತಲುಪಿದೆ: ಸೈಟ್ ವಾಪಸ್ ಪಡೆಯುವ ಬಗ್ಗೆ ಮುಡಾ ಆಯುಕ್ತರು ಹೇಳಿದ್ದೇನು? - Muda Case

ABOUT THE AUTHOR

...view details