ಬೆಂಗಳೂರು:ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಏರಿಕೆ ಮಾಡಿರುವುದು ಜನ ವಿರೋಧಿ ನಿರ್ಧಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.
ಧವಳಗಿರಿ ನಿವಾಸದ ಬಳಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪೆಟ್ರೋಲ್-ಡೀಸೆಲ್ ದರ ಆರಂಭವಷ್ಟೇ, ಇನ್ನು ಈ ರಾಜ್ಯದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆಗಳೂ ಗಗನಕ್ಕೇರಲಿವೆ. ಜನಸಾಮಾನ್ಯರು, ಕಾರ್ಮಿಕರು, ಬಡವರು ಹಾಗೂ ಮಧ್ಯಮ ವರ್ಗದವರು ಬೆಲೆ ಏರಿಕೆಯ ಚಕ್ರವ್ಯೂಹದಲ್ಲಿ ಸಿಲುಕಿ ನಲುಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು.
ಮೊನ್ನೆ ಮುದ್ದೆಬಿಹಾಳದ ಕಾಂಗ್ರೆಸ್ ಶಾಸಕರ ಹೇಳಿಕೆಯನ್ನು ಗಮನಿಸಿದ್ದೇನೆ. ಈ ಸರ್ಕಾರ ಬಂದ ಮೇಲೆ ಒಂದು ವರ್ಷದಿಂದ ಅಭಿವೃದ್ಧಿಗೆ ಹಣ ನೀಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಎಂ ಆದಮೇಲೆ ಯಾವುದೇ ಅನುದಾನ ಕ್ಷೇತ್ರಕ್ಕೆ ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ಇಂಥ ಸಂದರ್ಭದಲ್ಲಿ ನಾನು ರಾಜಕೀಯ ಮಾಡುವ ಇಚ್ಛೆಯನ್ನು ಕಳೆದುಕೊಂಡಿದ್ದೇನೆ. ನನ್ನ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡುತ್ತೇನೆ ಎಂದು ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ಇದು ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದರಿಂದ ಯಾವ ರೀತಿ ಆಡಳಿತ ನಡೆಸುತ್ತಿದ್ದಾರೆ ಎಂದು ಗೊತ್ತಾಗುತ್ತದೆ ಎಂದು ಟೀಕಿಸಿದರು.
ರಾಜ್ಯದ ಇತಿಹಾಸದಲ್ಲಿ ಇಂದಿನ ಕಾಂಗ್ರೆಸ್ ಸರ್ಕಾರದಷ್ಟು ಜನ ವಿರೋಧಿ ಸರ್ಕಾರವನ್ನು ರಾಜ್ಯದ ಜನತೆ ಎಂದೂ ಕಂಡಿಲ್ಲ. ಸುಳ್ಳು ಭರವಸೆಗಳು ಹಾಗೂ ಯೋಜನೆಗಳನ್ನು ಪೂರೈಸಲಾಗದೇ ರಾಜ್ಯದ ಖಜಾನೆಯನ್ನು ಬರಿದು ಮಾಡಿಕೊಂಡಿರುವ ಈ ಸರ್ಕಾರ ಜನಕಲ್ಯಾಣವನ್ನು ಮರೆತು ಭ್ರಷ್ಟಾಚಾರದಲ್ಲಿ ತೊಡಗಿ ರಾಜ್ಯದ ಜನತೆಯನ್ನು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.