ಮಂಗಳೂರು(ದಕ್ಷಿಣ ಕನ್ನಡ):ತೈಲಬೆಲೆ ಏರಿಕೆ ವಿರುದ್ಧ ದ.ಕ.ಜಿಲ್ಲಾ ಬಿಜೆಪಿ ವತಿಯಿಂದ ನಗರದ ಪಿವಿಎಸ್ ವೃತ್ತದ ಬಳಿ 'ರಾಸ್ತಾ ರೋಕೊ' ನಡೆಯಿತು. ಈ ಸಂದರ್ಭದಲ್ಲಿ ಪೊಲೀಸರು ಸಂಸದ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆದುಕೊಂಡರು.
ಬ್ರಿಜೇಶ್ ಚೌಟ ಹಾಗು ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಮಂಗಳೂರಿನ ಬಿಜೆಪಿ ಮುಖಂಡರು ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಪ್ರತಿಭಟನಾಕಾರರು 'ರಾಸ್ತಾ ರೋಕ್' ನಡೆಸಲು ಪಿವಿಎಸ್ ವೃತ್ತದ ಬಳಿ ಆಗಮಿಸಿದರು. ಮಾನವ ಸರಪಳಿ ರಚಿಸಿದ ಪ್ರತಿಭಟನಾಕಾರರು ರಸ್ತೆಯ ಮೂರು ದಾರಿಗಳಿಂದ ಬರುವ ವಾಹನಗಳನ್ನು ತಡೆದರು. ಈ ವೇಳೆ ಕಾರೊಂದು ಮುಂದೆ ಚಲಾಯಿಸಲು ಯತ್ನಿಸಿದಾಗ ತಡೆದು ಘೋಷಣೆ ಕೂಗಿ ಹಿಂದೆ ಸರಿಯುವಂತೆ ಮಾಡಿದರು.
ಬಳಿಕ ಪೊಲೀಸರು ರಸ್ತೆ ತಡೆ ನಿಲ್ಲಿಸುವಂತೆ ಒತ್ತಾಯಿಸಿದರೂ, ಪ್ರತಿಭಟನಾಕಾರರಿಂದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮತ್ತಷ್ಟು ತಾರಕಕ್ಕೇರಿತು. ಆಗ ಯುವ ಮೋರ್ಚದ ಕೆಲ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.