ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿ ನಿಗಮದ ಅಧ್ಯಕ್ಷ ಮತ್ತು ಶಾಸಕ ಬಸನಗೌಡ ದದ್ದಲ್ ಮತ್ತು ಸಚಿವ ಶರಣಪ್ರಕಾಶ್ ಪಾಟೀಲರ ರಾಜೀನಾಮೆ ಪಡೆಯುವಂತೆ ಹಾಗೂ ಈ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳೂ ರಾಜೀನಾಮೆ ಕೊಡಬೇಕು ಎಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಒಂದಾದ ನಂತರ ಒಂದು ಸಾಕ್ಷ್ಯಾಧಾರಗಳು ಸಿಗುತ್ತಿವೆ. ಇದು ದಲಿತರ ಹಣ ಲೂಟಿಯ ಬ್ರಹ್ಮಾಂಡ ಭ್ರಷ್ಟಾಚಾರದ ಪ್ರಕರಣ. ಇನ್ನೂ ಬೇರೆ ಬೇರೆ ಇಲಾಖೆಗಳಲ್ಲೂ ಭ್ರಷ್ಟಾಚಾರ ಹಗರಣ ನಡೆದ ವಾಸನೆ ನಮಗೆ ಸಿಗುತ್ತಿದೆ. ಸಾಕ್ಷ್ಯಾಧಾರ ಸಂಗ್ರಹದ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.
ಅತ್ಯಂತ ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರ್ ಅವರು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ತಮ್ಮ ಪತ್ರದಲ್ಲಿ ಸಚಿವರ ಮೌಖಿಕ ಸೂಚನೆ ಮೇರೆಗೆ ಹಣದ ವರ್ಗಾವಣೆ ಆಗಿದೆ ಎಂದು ಉಲ್ಲೇಖಿಸಿದ್ದರು. ಇದೀಗ ಲೆಕ್ಕಾಧಿಕಾರಿ ಪರಶುರಾಮ್ ಅವರು 24ರಂದು ವೈದ್ಯಕೀಯ ಶಿಕ್ಷಣ ಸಚಿವರ ಕಚೇರಿಯಲ್ಲಿ ಸಭೆ ಕುರಿತು ಮಾಹಿತಿ ನೀಡಿದ್ದಾರೆ. ಈಗಾಗಲೇ ಸಚಿವ ನಾಗೇಂದ್ರ ಅವರು ರಾಜೀನಾಮೆ ಕೊಟ್ಟಿದ್ದಾರೆ. ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಯಾಕೆ ರಾಜೀನಾಮೆ ಕೊಟ್ಟಿಲ್ಲ? ಅವರನ್ನು ಮುಖ್ಯಮಂತ್ರಿಗಳು ರಕ್ಷಿಸುತ್ತಿರುವುದು ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದರು.