ಬೆಂಗಳೂರು: ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ ವಿಜಯೇಂದ್ರ ಅವರನ್ನು ಕೆಳಗಿಳಿಸಲು ಪಟ್ಟು ಹಿಡಿದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಟೀಂಗೆ ಹೈಕಮಾಂಡ್ ಭೇಟಿಗೆ ಅವಕಾಶ ಸಿಗದ ಕಾರಣ ದೆಹಲಿಯಿಂದ ವಾಪಸ್ ಆಗಿದೆ.
ಇನ್ನು ಮಂಗಳವಾರ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಕುಮಾರ್ ಬಂಗಾರಪ್ಪ ಅವರು ಕೆಲವು ದೆಹಲಿ ನಾಯಕರನ್ನು ಭೇಟಿ ಮಾಡಿ ಚರ್ಚೆ ಮಾಡಿತ್ತು. ಇದೀಗ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮಾಜಿ ಸಂಸದ ಸಿದ್ದೇಶ್ವರ್ ನೇತೃತ್ವದ ತಂಡ ವರಿಷ್ಠರ ಭೇಟಿಗೆ ಯತ್ನಿಸುತ್ತಿದೆ.
ಇಡೀ ಲಿಂಗಾಯತ ಸಮುದಾಯ ಬಿ.ವೈ. ವಿಜಯೇಂದ್ರ ಹಿಂದೆ ಇಲ್ಲ. ಬಿ.ಎಸ್. ಯಡಿಯೂರಪ್ಪ ವರ್ಚಸ್ಸು ವಿಜಯೇಂದ್ರಗೆ ಇಲ್ಲ. ವಿಜಯೇಂದ್ರ ಬದಲಿಸಿದರೆ ಯಾವುದೇ ಹಿನ್ನಡೆ ಆಗುವುದಿಲ್ಲ ಎನ್ನುತ್ತಿರುವ ಬಣ, ಅಧ್ಯಕ್ಷ ಸ್ಥಾನದಿಂದ ವಿಜಯೇಂದ್ರರನ್ನು ಬದಲಿಸುವಂತೆ ಮನವಿ ಮಾಡಲಿದೆ. ಜೊತೆಗೆ ತಟಸ್ಥ ಗುಂಪಿನಲ್ಲಿರುವ ನಾಯಕರು ಕೂಡ ಬೆಂಬಲ ಕೊಡಲಿದ್ದಾರೆ ಎಂಬ ವಿಶ್ವಾಸದಲ್ಲಿ ಯತ್ನಾಳ್ ತಂಡ ಇದೆ. ಈ ಮಧ್ಯೆ ಯತ್ನಾಳ್ ಬಣ ಸಂಸದ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.
ರೆಬಲ್ ಟೀಂ ಬೇಡಿಕೆ ಏನು?:ಕುಟುಂಬ ರಾಜಕಾರಣ, ಭ್ರಷ್ಟಾಚಾರ ಮುಕ್ತ ಹಾಗೂ ಹಿಂದುತ್ವದ ವಿರೋಧಿಗಳನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು. ಇದರ ಜೊತೆಗೆ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ಪಕ್ಷ ಸಿದ್ಧಾಂತ ಎಂಬ ಬೇಡಿಕೆಯನ್ನೂ ಬಿಜೆಪಿ ಹೈಕಮಾಂಡ್ ಮುಂದೆ ಯತ್ನಾಳ್ ಟೀಂ ಇಟ್ಟಿದೆ ಎನ್ನಲಾಗಿದೆ.
ಎಲ್ಲ ಲಿಂಗಾಯತರು ಬಿ.ಎಸ್.ಯಡಿಯೂರಪ್ಪ ಪರವಾಗಿಲ್ಲ: ದೆಹಲಿಯಲ್ಲಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ನಮ್ಮ ಕೆಲವು ನಾಯಕರು ಕೆಲವರನ್ನು ಮಂಗಳವಾರ ಭೇಟಿಯಾಗಿದ್ದಾರೆ. ರಾಜ್ಯದಲ್ಲಿ ಎಲ್ಲ ಲಿಂಗಾಯತರು ಬಿ.ಎಸ್. ಯಡಿಯೂರಪ್ಪ ಪರವಾಗಿಲ್ಲ. ಅವರು ಆ ಗೌರವ ಉಳಿಸಿಕೊಂಡಿಲ್ಲ. ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡುವುದಕ್ಕೆ ನಮ್ಮ ವಿರೋಧ ಇದೆ ಎಂದು ಹೇಳಿದ್ದಾರೆ.
ಯಡಿಯೂರಪ್ಪನವರ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದ ಮಾಜಿ ಸಂಸದ ಸಿದ್ದೇಶ್ವರ್, ಅವರ ವಾಸಕ್ಕೆ ಮನೆ ಬಿಟ್ಟು ಕೊಟ್ಟ ಮಲ್ಲಿಕಾರ್ಜುನಯ್ಯ, ಅನಂತಕುಮಾರ್, ಬಿಬಿ ಶಿವಪ್ಪ ಮೊದಲಾದವರನ್ನೆಲ್ಲ ತುಳಿದ ಯಡಿಯೂರಪ್ಪ ಅವರನ್ನು ಉಳಿಸುವುದು ಈಗ ಯಾರಿಂದಲೂ ಸಾಧ್ಯವಿಲ್ಲ. ಇಬ್ಬರು ಮೂವರು ಪೇಮೆಂಟ್ ಸ್ವಾಮೀಜಿಗಳು ಅವರ ಜೊತೆಗಿದ್ದಾರೆ ಅಷ್ಟೇ ಎಂದರು.
ವಿಜಯೇಂದ್ರ, ಬಿಎಸ್‌ವೈ ಅವರ ನಕಲಿ ಸಹಿ ಮಾಡಿದ್ದಾರೆ. ವಿಜಯೇಂದ್ರ ಕರ್ಮಕಾಂಡ ಬಹಳ ಇದೆ. ಬಹಳಷ್ಟು ಲಿಂಗಾಯತ ನಾಯಕರನ್ನು ಮುಗಿಸಿದ್ರು. ನನ್ನ ಸತತವಾಗಿ ಮುಗಿಸುವ ಪ್ರಯತ್ನ ಮಾಡಿದರು ಎಂದು ಆರೋಪಿಸಿದರು.