ಕಲಬುರಗಿ:ಎಸ್ಇಪಿ ಹಾಗೂ ಟಿಎಸ್ಪಿ ಕಾಯ್ದೆ ಮೀಸಲು ಹಣ ಬೇರೆ ಯೋಜನೆಗಳಿಗೆ ಬಳಕೆ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬೆರಳು ಮಾಡುವ ನೈತಿಕ ಹಕ್ಕು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಬುಧವಾರ ರಾತ್ರಿ ಜೇವರ್ಗಿ ಪಟ್ಟಣದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳಿಗೆ ಮೀಸಲಿಟ್ಟ ಹಣವನ್ನು ಅವರಿಗೆ ತಲುಪಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಮೋದಿ ಹೇಳುತ್ತಿದ್ದಾರೆ. ಈ ಬಗ್ಗೆ ಜಾಹೀರಾತು ನೀಡಿದ್ದಾರೆ. ರಾಜ್ಯದ ಕಡೆ ಬೆರಳು ಮಾಡುವ ಮೋದಿಯವರೇ ಹತ್ತು ವರ್ಷದಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನೀವು ಈ ಕಾಯ್ದೆಯನ್ನು ಜಾರಿಗೆ ತಂದಿದ್ದೀರಾ? ಎಂದು ಸಿಎಂ ಪ್ರಶ್ನೆ ಮಾಡಿದ್ದರು.
ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಹಿತದೃಷ್ಟಿಯಿಂದ 2013ರಲ್ಲಿ ರಾಜ್ಯದಲ್ಲಿ ನಾವು ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ. ಬಿಜೆಪಿ ಆಡಳಿತದಲ್ಲಿರುವ ಯಾವುದಾದರೂ ಒಂದು ರಾಜ್ಯದಲ್ಲಿಯಾದ್ರೂ ಎಸ್ಇಪಿ ಟಿಎಸ್ಪಿ ಕಾಯ್ದೆ ಜಾರಿಯಲ್ಲಿದೆಯಾ? ಎಂದು ಸಿಎಂ ಮರುಪ್ರಶ್ನೆ ಮಾಡಿದರು.