ಬೀದರ್:ಮಹಾರಾಷ್ಟ್ರ-ಕರ್ನಾಟಕ ಗಡಿಭಾಗದ ಬಸವಕಲ್ಯಾಣ ತಾಲೂಕಿನ ಉಜಳಾಂಬ ಗ್ರಾಮದ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ ಸುಮಾರು 2 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಗಾಂಜಾವನ್ನು ಬೀದರ್ ಪೊಲೀಸರು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹೇಳಿದ್ದಾರೆ.
ಮಹಾರಾಷ್ಟ್ರದ ರೈತ ಬಸವಂತ ಎಂಬವರು ಕರ್ನಾಟಕಕ್ಕೆ ಸೇರಿದ ಸರ್ವೇ ನಂಬರ್‌ನ ಜಮೀನಿನಲ್ಲಿ ಗಾಂಜಾ ಬೆಳೆದಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಜಮೀನಿನಲ್ಲಿ ತೊಗರಿ ಬೆಳೆಯ ಮಧ್ಯೆ ಗಾಂಜಾ ಗಿಡಗಳನ್ನು ನೆಡಲಾಗಿತ್ತು. ಅಂದಾಜು 6 ಅಡಿಯಷ್ಟು ಎತ್ತರ ಗಿಡಗಳು ಬೆಳೆದಿದ್ದವು. ನಮ್ಮ ಸಿಬ್ಬಂದಿ ಪಂಚನಾಮ ನಡೆಸಿ, ಸುಮಾರು 700ಕ್ಕಿಂತ ಹೆಚ್ಚು ಗಿಡಗಳನ್ನು ಕಿತ್ತು ಹಾಕಿದ್ದಾರೆ. ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. ಸುಮಾರು 2 ಕೋಟಿಗೂ ಅಧಿಕ ಮೌಲ್ಯದ 400 ಕೆ.ಜಿ ಗಾಂಜಾ ಇರಬಹುದೆಂದು ಅಂದಾಜಿಸಲಾಗಿದೆ. ಆರೋಪಿ ಪರಾರಿಯಾಗಿದ್ದು, ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಎಸ್ಪಿ ತಿಳಿಸಿದರು.