ಬೆಂಗಳೂರು:ಮುಡಾ ಹಗರಣ ಹಾಗು ವಾಲ್ಮೀಕಿ ನಿಗಮ ಹಗರಣಗಳನ್ನು ಜನರ ಮುಂದಿಡಲು ಬಿಜೆಪಿ ನಿರ್ಧರಿಸಿದ್ದು, ದೋಸ್ತಿ ಪಕ್ಷ ಜೆಡಿಎಸ್ ಜೊತೆಗೂಡಿ ಬೆಂಗಳೂರು ಟು ಮೈಸೂರು ಪಾದಯಾತ್ರೆಗೆ ಮುಂದಾಗಿದೆ. ಒಂದೂವರೆ ದಶಕದ ನಂತರ ರಾಜ್ಯದಲ್ಲಿ ಮೊದಲ ಬೃಹತ್ ರಾಜಕೀಯ ಹೋರಾಟದ ಪಾದಯಾತ್ರೆ ನಡೆಯುತ್ತಿದೆ.
ಮುಡಾ ಹಾಗು ವಾಲ್ಮೀಕಿ ನಿಗಮ ಹಗರಣ ಕುರಿತು ಸದನದಲ್ಲಿ ಚರ್ಚೆಗೆ ಸರಿಯಾದ ವೇದಿಕೆ ಲಭ್ಯವಾಗದ ಹಿನ್ನೆಲೆಯಲ್ಲಿ ಜನತಾ ನ್ಯಾಯಾಲಯಕ್ಕೆ ಕೊಂಡೊಯ್ಯಲು ಬಿಜೆಪಿ ಮತ್ತು ಜೆಡಿಎಸ್ ನಿರ್ಧರಿಸಿದೆ. ಬೃಹತ್ ಪಾದಯಾತ್ರೆ ಮೂಲಕ ಜನರಿಗೆ ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ಮನವರಿಕೆ ಮಾಡಿಕೊಡಲು ತೀರ್ಮಾನಿಸಿದೆ. ಅದಕ್ಕಾಗಿ 140 ಕಿಲೋಮೀಟರ್ಗಳ ಬೃಹತ್ ಪಾದಯಾತ್ರೆಗೆ ನಿರ್ಧರಿಸಲಾಗಿದೆ.
ಬೆಂಗಳೂರು ಹೊರವಲಯದ ನೈಸ್ ರೋಡ್ ಜಂಕ್ಷನ್ನಿಂದ ಪಾದಯಾತ್ರೆ ಆರಂಭಿಸಿ ಬಿಡದಿ, ರಾಮನಗರ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದ ಮೂಲಕ ಮೈಸೂರಿಗೆ ಸಾಗಲು ಬಿಜೆಪಿ ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ. ಕೇವಲ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಸಾಗದೆ ಪ್ರಮುಖ ಪಟ್ಟಣಗಳ ಒಳಹಾದಿ ಮೂಲಕ ಸಾಗಿ ಜನರನ್ನು ತಲುಪಬೇಕು. ಅಲ್ಲಲ್ಲಿ ಸಮಾವೇಶಗಳನ್ನು ಆಯೋಜನೆ ಮಾಡುವ ಮೂಲಕ ಸರ್ಕಾರದ ಹಗರಣಗಳನ್ನು ಎಳೆ ಎಳೆಯಾಗಿ ಜನತೆಯ ಮುಂದೆ ಬಿಚ್ಚಿಡಬೇಕು ಎಂದು ನಿರ್ಧರಿಸಿದ್ದು, ಅದಕ್ಕಾಗಿ ರೂಪುರೇಶೆ ಸಿದ್ದಪಡಿಸಲಾಗುತ್ತಿದೆ. ಯಾವ ಮಾರ್ಗದ ಮೂಲಕ ಸಾಗಬೇಕು. ಯಾವ ಪಟ್ಟಣದಲ್ಲಿ ಒಳಗೆ ಸಾಗಬೇಕು. ಸಮಾವೇಶಗಳು ಎಲ್ಲಿ ನಡೆಸಬೇಕು. ಮೈಸೂರಿನಲ್ಲಿ ಪಾದಯಾತ್ರೆಯ ಸಮಾರೋಪ ಸಮಾರಂಭ ಬೃಹತ್ ಪ್ರಮಾಣದಲ್ಲಿ ನಡೆಸುವ ಕುರಿತು ಅಂತಿಮ ಹಂತದ ಪರಿಶೀಲನೆಗಳು ನಡೆಯುತ್ತಿದೆ.
ಬೆಂಗಳೂರಿನಿಂದ ಮೈಸೂರುವರೆಗೂ ಪಾದಯಾತ್ರೆ ಸಾಗುವ ಇಡೀ ಮಾರ್ಗ ಜನತಾದಳದ ಕಾರಿಡಾರ್ ಆಗಿದೆ. ದಳಪತಿಗಳ ಕೋಟೆಯೊಳಗೆ ಕೇಸರಿ ಪಡೆ ನಡೆಸುತ್ತಿರುವ ಪಾದಯಾತ್ರೆ ಇದಾಗಿದೆ. ಜೆಡಿಎಸ್ ಈಗ ಎನ್ಡಿಎ ಭಾಗವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಪಾದಯಾತ್ರೆಯಲ್ಲಿ ಜನತಾದಳ ಪೂರ್ಣ ಪ್ರಮಾಣದಲ್ಲಿ ಭಾಗಿಯಾಗುತ್ತಿದೆ. ಜನತಾದಳದ ವಿಶ್ವಾಸದೊಂದಿಗೆ ಪಾದಯಾತ್ರೆ ನಡೆಸಲಾಗುತ್ತಿದೆ. ಇದು ಬಿಜೆಪಿಯ ಸಂಘಟಿತ ಕೇಡರ್ ಬೇಸ್ ಅಲ್ಲದ ಭಾಗವಾಗಿರುವ ಕಾರಣ ಪಾದಯಾತ್ರೆ ಕಳೆಗುಂದದಿರಲು ಜೆಡಿಎಸ್ನ ಸಹಕಾರವನ್ನು ಪಡೆದುಕೊಳ್ಳಲಾಗುತ್ತಿದೆ. ಪಾದಯಾತ್ರೆ ಮಾರ್ಗದುದ್ದಕ್ಕೂ ಸ್ಥಳೀಯ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಪಾಲ್ಗೊಂಡು ಪಾದಯಾತ್ರೆಯನ್ನು ಸಫಲಗೊಳಿಸಬೇಕು ಎಂದು ನಿರ್ಧರಿಸಿದ್ದು, ಇದಕ್ಕಾಗಿ ಬೂತ್ ಮಟ್ಟದ ಸಿದ್ದತೆಗಳು ಆರಂಭವಾಗಿವೆ. ಉಭಯ ಪಕ್ಷಗಳ ವಿಧಾನಸಭಾವಾರು ನಾಯಕರು ಸಮ್ಮಿಳಿತ ರೀತಿಯಲ್ಲಿ ಕಾರ್ಯಕರ್ತರ ಪಡೆಯನ್ನು ಪಾದಯಾತ್ರೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ನಿರ್ಧಾರ ಮಾಡಲಾಗಿದೆ.
ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸುವ ನಿರ್ಧಾರ ಮಾಡಿದ್ದರೂ ದಿನಾಂಕವನ್ನು ಅಂತಿಮಗೊಳಿಸಿಲ್ಲ. ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಈಗ ಕೇಂದ್ರ ಸಚಿವರಾಗಿದ್ದು, ದೆಹಲಿಯಲ್ಲಿರುವ ಹಿನ್ನೆಲೆ ಅವರೊಂದಿಗೆ ಚರ್ಚಿಸಲು ಸಾಧ್ಯವಾಗದ ಕಾರಣದಿಂದ ದಿನಾಂಕ ನಿಗದಿ ಬಾಕಿ ಉಳಿದಿದೆ. ಶನಿವಾರ ಹಾಗು ಭಾನುವಾರ ರಾಜ್ಯಕ್ಕೆ ಕುಮಾರಸ್ವಾಮಿ ಆಗಮಿಸಲಿಸಿದ್ದು, ಕುಮಾರಸ್ವಾಮಿ ಉಪಸ್ಥಿತಿಯಲ್ಲಿಯೇ ಉಭಯ ಪಕ್ಷಗಳ ನಾಯಕರು ಜಂಟಿ ಸಭೆ ನಡೆಸಿ ಪಾದಯಾತ್ರೆ ದಿನಾಂಕವನ್ನು ಅಂತಿಮಗೊಳಿಸಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, 28 ರಂದು ಎನ್.ಡಿ.ಎ ಸಭೆ ನಡೆಸಿ ಪಾದಯಾತ್ರೆ ದಿನಾಂಕ ಹಾಗು ಮಾರ್ಗ ಸೇರಿದಂತೆ ಇತ್ಯಾದಿ ಕಾರ್ಯಕ್ರಮಗಳ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.