ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯಲ್ಲು ವಿಪತ್ತು ನಿರ್ವಹಣೆಗಾಗಿ ಆಯಾ ವಲಯಗಳ ಉಪ ವಿಭಾಗಗಳ ಹಂತದಲ್ಲಿ ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಿ ಮಳೆಗಾಲದಲ್ಲಿ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚಿಸಿದ್ದಾರೆ.
ನಗರದಲ್ಲಿ ವಿಪತ್ತು ನಿರ್ವಹಣೆಗೆ ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು, ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗುವುದು, ಮ್ಯಾನ್ ಹೋಲ್‌ಗಳು ತೆರೆದುಕೊಳ್ಳುವುದು, ಮರ/ವಿದ್ಯುತ್ ಕಂಬಗಳು ಬೀಳುವುದನ್ನು ಹಾಗೂ ಮಳೆಯಿಂದಾಗುವ ಅನಾಹುತಗಳನ್ನು ತಡೆಗಟ್ಟುವ ಸಲುವಾಗಿ ಆಯಾ ವಲಯಗಳ ಉಪ ವಿಭಾಗಗಳಲ್ಲಿ ಪಾಲಿಕೆ, ಜಲಮಂಡಳಿ, ಬೆಸ್ಕಾಂ, ಮೆಟ್ರೋ, ಅಗ್ನಿ ಶಾಮಕ ಸೇರಿದಂತೆ ಇನ್ನಿತರ ಇಲಾಖೆಗಳ ಅಧಿಕಾರಿಗಳನ್ನೊಳನ್ನು ಒಳಗೊಂಡ ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜನೆ ಮಾಡಿಕೊಳ್ಳುವಂತೆ ಸೂಚಿಸಿದರು.
ನಗರದಲ್ಲಿ ಕಳೆದ ಒಂದು ವಾರದಿಂದ ಬೇರೆ ಬೇರೆ ಸ್ಥಳಗಳಲ್ಲಿ ಮಳೆಯಾಗುತ್ತಿದ್ದು, ಒಂದು ಕಡೆ ಒಂದೊಂದು ರೀತಿಯಲ್ಲಿ ಮಳೆಯಾಗುತ್ತಿದೆ. ಕೆಲವಡೆ ಸಾಮಾನ್ಯ, ಇನ್ನು ಕೆಲವೆಡೆ ಮಧ್ಯಮ ಹಾಗೂ ಹೆಚ್ಚಾಗಿ ಮಳೆಯಾಗಿರುವ ವರದಿಯಾಗಿದೆ. ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸುಮಾರು 150 ಕಡೆ ನೀರು ನಿಂತಿದೆ. ನಿಂತ ನೀರು 2 ಗಂಟೆಯೊಳಗಾಗಿ ಹರಿದುಹೋಗಿದ್ದು, ಯಾವುದೇ ರೀತಿಯ ಸಮಸ್ಯೆಯಾಗಿಲ್ಲ ಎಂದು ಹೇಳಿದರು.
ನಗರದಲ್ಲಿ ಮಳೆ ಪ್ರಾರಂಭವಾದಾಗಿನಿಂದ 325 ಮರಗಳು ಬಿದ್ದಿದ್ದು, ಅದರಲ್ಲಿ 320 ಮರಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೆ 698 ರೆಂಬೆ ಕೊಂಬೆಗಳು ಬಿದ್ದಿದ್ದು ಅವುಗಳನ್ನು ತೆರವುಗೊಳಿಸಲಾಗಿದೆ. ಉಳಿದ ಮರ, ರೆಂಬೆ/ಕೊಂಬೆಗಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದರು. ಮಳೆಯಿಂದಾಗಿ ಧರಗುರುಳಿದ ಮರ, ರೆಂಬೆ ಕೊಂಬೆಗಳನ್ನು ತೆರವುಗೊಳಿಸಲು 39 ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ಕಟಾವು ಮಾಡಿ ರಸ್ತೆ ಬದಿಗೆ ಹಾಕಿದವುಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.
ಸೆನ್ಸಾರ್ಗಳ ಮೇಲ್ವಿಚಾರಣೆಯ ಕುರಿತು ವಿವರಣೆ: ಪಾಲಿಕೆ ವ್ಯಾಪ್ತಿಯಲ್ಲಿ ಪ್ರವಾಹ ನಿಭಾಯಿಸಲು ಮತ್ತು ಪ್ರತಿಕ್ರಿಯಿಸಲು ರಾಜ ಕಾಲುವೆಗಳಲ್ಲಿ ತಂತ್ರಜ್ಞಾನ ಬಳಸಿಕೊಂಡು 124 ಕಡೆ ನೀರಿನ ಮಟ್ಟ ಅಳೆಯುವ ಸಂವೇದಕಗಳನ್ನು ಕೆ.ಎಸ್.ಎನ್.ಡಿ.ಎಂ.ಸಿ ಹಾಗೂ ಭಾರತೀಯ ವಿಜ್ಙಾನ ಸಂಸ್ಥೆಯ ಸಹಯೋಗದಲ್ಲಿ ಅಳವಡಿಸಲಾಗಿದೆ. ಅದನ್ನು ಪಾಲಿಕೆಯ ಇಂಟಿಗ್ರೇಟೆಡ್ ಕಮಾಂಡಿಂಗ್ ಕಂಟ್ರೋಲ್ ಸೆಂಟರ್ನಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಪ್ರಹ್ಲಾದ್ ಮಾಧ್ಯಮ ಪ್ರತಿನಿಧಿಗಳನ್ನು ಕರೆದೊಯ್ದು ಅದು ಯಾವ ರೀತಿ ಕಾರ್ಯನಿರ್ವಹಿಸಲಿದೆ ಎಂಬುದರ ಕುರಿತು ವಿವರಣೆ ನೀಡಿದರು.