ಕರ್ನಾಟಕ

karnataka

ETV Bharat / state

'ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ'

ಡಿ.9ರಿಂದ ನಡೆಯುವ ಚಳಗಾಲದ ಅಧಿವೇಶನದಲ್ಲಿ ಮೊದಲ ದಿನ ಸಂತಾಪ ಸೂಚಕ ಗೊತ್ತುವಳಿ ಮಂಡನೆಯಾಗುವುದರಿಂದ 10ರಂದು ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

Basavajaya Mrityunjaya Swamiji
ಬಸವಜಯ ಮೃತ್ಯುಂಜಯ ಸ್ವಾಮೀಜಿ (ETV Bharat)

By ETV Bharat Karnataka Team

Published : 4 hours ago

Updated : 2 hours ago

ಹುಬ್ಬಳ್ಳಿ:"ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಡಿ.10ರಂದು ಟ್ರ್ಯಾಕ್ಟರ್ ಚಳವಳಿಯೊಂದಿಗೆ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ" ಎಂದು ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಲಿಂಗಾಯತ ಪಂಚಮಸಾಲಿ ವಕೀಲರ ಪ್ರಥಮ ಮಹಾಪರಿಷತ್ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, "ರಾಜ್ಯ ಸರ್ಕಾರ ಡಿ.9ರಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಲು ನಿರ್ಧರಿಸಿದೆ. ಮೊದಲ ದಿನ ಸಂತಾಪ ಸೂಚಕ ಗೊತ್ತುವಳಿ ಮಂಡನೆ ಆಗುವುದರಿಂದ 10ರಂದು ಮುತ್ತಿಗೆ ಹಾಕುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದೇವೆ" ಎಂದರು.

ಬಸವಜಯ ಮೃತ್ಯುಂಜಯ ಸ್ವಾಮೀಜಿ (ETV Bharat)

"ಒಂದು ವೇಳೆ ರಾಜ್ಯ ಸರ್ಕಾರ ಅಧಿವೇಶನದ ದಿನಾಂಕ ಬದಲಾವಣೆ ಮಾಡಿದಲ್ಲಿ, ಯಾವ ದಿನಾಂಕದಂದು ಅಧಿವೇಶನ ನಡೆಸಲಾಗುವುದೋ ಅದರ ಮಾರನೇ ದಿನ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಸಮಾಜಬಾಂಧವರು ಸಿದ್ಧರಿದ್ದಾರೆ. ಸಮಾಜದ ಸುಮಾರು 10 ಸಾವಿರ ವಕೀಲರು ಸೇರಿ 5 ಲಕ್ಷ ಜನ ಸೇರಲಿದ್ದೇವೆ. ಪ್ರತಿ ಹಳ್ಳಿಯಿಂದ ಹತ್ತರಂತೆ 5 ಸಾವಿರ ಟ್ರ್ಯಾಕ್ಟರ್‌ಗಳೊಂದಿಗೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ" ಎಂದು ತಿಳಿಸಿದರು.

"ಅಧಿವೇಶನದಲ್ಲಿ ಸದನದ ಒಳಗೆ ಲಿಂಗಾಯತ ಪಂಚಾಮಸಾಲಿ ಸಮಾಜದ ಶಾಸಕರು ಅಹೋರಾತ್ರಿ ಧರಣಿ ನಡೆಸಲಿದ್ದಾರೆ. ಇದರಲ್ಲಿ ಪಕ್ಷಾತೀತವಾಗಿ ಸಮಾಜದ ಎಲ್ಲ ಶಾಸಕರು ಭಾಗವಹಿಸಬೇಕು. ತಪ್ಪಿದಲ್ಲಿ ಸಮಾಜದ ವಿಶ್ವಾಸ ಕಳೆದುಕೊಳ್ಳುವ ಸ್ಥಿತಿ ಶಾಸಕರಿಗೆ ಬರಬಹುದು. ಈ ಹಿಂದೆ ಸಮಾಜದ ಶಾಸಕರು ಅಧಿವೇಶನದಲ್ಲಿ ಮಾತನಾಡದಿದ್ದಕ್ಕೆ ವಕೀಲರ ಪರಿಷತ್ ರಚನೆ ಮಾಡಿದ್ದು, ನಾವು ಶಾಸಕರಿಗಿಂತ ಸಮಾಜದ ಜನರ ಮೇಲೆ ಅವಲಂಬಿತ ಆಗಿದ್ದೇವೆ" ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

"2ಎ ಮೀಸಲಾತಿಗೆ ಆಗ್ರಹಿಸಿ ಕಳೆದ ಮೂರೂವರೆ ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರ ಸ್ಪಂದಿಸುತ್ತಿತ್ತು. ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಸಭೆ ಹಾಗೂ ಉಪ ಚುನಾವಣೆ ನೀತಿ ಸಂಹಿತೆ ಎಂದು ಜಾರಿಕೊಂಡಿದ್ದಾರೆ" ಎಂದು ಆಕ್ಷೇಪಿಸಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವ ಸಿ.ಸಿ. ಪಾಟೀಲ, ಎಚ್.ಎಸ್. ಶಿವಶಂಕರಪ್ಪ, ಶಂಕರಗೌಡ ನಾಗನಗೌಡ್ರ, ಶಶಿಶೇಖರ ಡಂಗನವರ, ರಾಜಶೇಖರ ಮೆಣಸಿನಕಾಯಿ, ಮೈಲಾರಿ ಧಾರವಾಡ, ಇತರರು ಇದ್ದರು.

ಇದನ್ನೂ ಓದಿ:ಸರ್ಕಾರಿ ಗುತ್ತಿಗೆಗಳಲ್ಲಿ ಅಲ್ಪಸಂಖ್ಯಾತರಿಗೆ 4% ಮೀಸಲಾತಿ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ: ಸಿಎಂ ಕಚೇರಿ

Last Updated : 2 hours ago

ABOUT THE AUTHOR

...view details