ಕರ್ನಾಟಕ

karnataka

ETV Bharat / state

ಬೆಳಗಾವಿ ಎಮ್ಮೆಗಳ ಓಟಕ್ಕಿದೆ ನೂರಾರು ವರ್ಷಗಳ ಇತಿಹಾಸ: ಮೈನವಿರೇಳಿಸಿದ ಎಮ್ಮೆಗಳ ಜೊತೆಗಿನ ಯುವಕರ ಸಾಹಸ

ಎಮ್ಮೆಗಳ ಓಟ ಒಂದೆಡೆಯಾದರೆ ಅವುಗಳಿಗೆ ಮುಖವಾಡ, ಕವಡಿ ಸರ, ಗೆಜ್ಜೆ, ಗಂಟೆ, ಹಂಗಡ ಕಟ್ಟಿ, ಇನ್ನು ಬಣ್ಣ ಬಳಿದಿದ್ದ ಕೋಡುಗಳಿಗೆ ನವಿಲು ಗರಿ, ಬೆಳ್ಳಿಯ ಕಳಸ ತೊಡಿಸಿ ಶೃಂಗರಿಸಿದ್ದು ಜನರನ್ನು ಇನ್ನಷ್ಟು ಗಮನ ಸೆಳೆಯಿತು.

ಕುಂದಾನಗರಿಯಲ್ಲಿ ಎಮ್ಮೆ ಓಟ
ಕುಂದಾನಗರಿಯಲ್ಲಿ ಎಮ್ಮೆ ಓಟ (ETV Bharat)

By ETV Bharat Karnataka Team

Published : Nov 2, 2024, 7:50 PM IST

Updated : Nov 2, 2024, 8:27 PM IST

ಬೆಳಗಾವಿ: ಗ್ರಾಮೀಣ ಪ್ರದೇಶಗಳಲ್ಲಿ ಎತ್ತು, ಎಮ್ಮೆ, ಕೋಣಗಳ ಓಟ ಆಯೋಜಿಸುವುದು ಸಾಮಾನ್ಯ. ಆದರೆ, ಬೆಳಗಾವಿಯಂಥ ಮಹಾನಗರದಲ್ಲಿ ನೂರಾರು ವರ್ಷಗಳಿಂದ ದೀಪಾವಳಿ ಹಬ್ಬದ ಗುಡಿ ಪಾಡವಾ ದಿನ ಎಮ್ಮೆಗಳನ್ನು ಬೆದರಿಸುವ ವಿಶಿಷ್ಟ ಆಚರಣೆಯೊಂದು ನಡೆದುಕೊಂಡು ಬರುತ್ತಿದೆ. ದೀಪಾವಳಿ ಹಬ್ಬದ ಹಿನ್ನೆಲೆ ಇಂದು ನಗರದ ಚವ್ಹಾಟ ಗಲ್ಲಿಯಲ್ಲಿ ಎಮ್ಮೆಗಳನ್ನು ಅಲಂಕರಿಸಿ ಓಡಿಸಿದ ದೃಶ್ಯ ನೋಡುಗರ ಮೈಜುಮ್ಮೆನ್ನುವಂತೆ ಮಾಡಿದೆ. ಎಮ್ಮೆಗಳ ಜೊತೆಗಿನ ಯುವಕರ ಸಾಹಸ ಮೈನವಿರೇಳಿಸಿದ್ದು, ಎಮ್ಮೆಗಳ ವೈಯಾರ, ಶೃಂಗಾರಕ್ಕೆ ಜನ ಫುಲ್ ಫಿದಾ ಆದರು.

ಎಮ್ಮೆ ರೈತರ ಪಾಲಿನ ನಿಜವಾದ ಲಕ್ಷ್ಮೀ ದೇವಿ. ವರ್ಷಪೂರ್ತಿ ಎಮ್ಮೆಗಳನ್ನು ಚೆನ್ನಾಗಿ ಮೇಯಿಸಿ, ಹಾಲು ಕರೆದು ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಾರೆ. ಆದರೆ ದೀಪಾವಳಿ ಬಂತೆಂದರೆ ಎಮ್ಮೆಗಳ ಕೂದಲು ಬೋಳಿಸಿ, ಮೈಯನ್ನು ಹುರಿಗೊಳಿಸಿ ಶೃಂಗರಿಸಿ ಸಂಭ್ರಮಿಸುವುದೇ ಇವರಿಗೆ ಹಬ್ಬ. ಇದು ಇಂದು, ನಿನ್ನೆಯದಲ್ಲ. ತಮ್ಮ ಪೂರ್ವಜರ ಕಾಲದಿಂದಲೂ ನಡೆಯುತ್ತಿದೆ ಎಂಬುದು ಆಯೋಜಕರ ಮಾತು.

ಕುಂದಾನಗರಿಯಲ್ಲಿ ಎಮ್ಮೆ ಓಟ (ETV Bharat)

ವಾರಗಟ್ಟಲೇ ಎಮ್ಮೆಗಳನ್ನು ತಯಾರಿ ಮಾಡುವ ರೈತರು, ಇಂದಿನ ಯುವಕರು ಮಾಡುವಂತೆ ಎಮ್ಮೆಗಳಿಗೂ ಸ್ಟೈಲಿಶ್ ಆಗಿ ಹೇರ್ ಕಟಿಂಗ್ ಮಾಡಿಸುತ್ತಾರೆ. ಮೈಗೆ ಬಣ್ಣದ ಚಿತ್ರಗಳನ್ನು ಬಿಡಿಸಿ, ಗುಲಾಲ್ ಎರಚುತ್ತಾರೆ. ಹೀಗೆ ಹಬ್ಬದಲ್ಲಿ ಒಂದಕ್ಕಿಂತ ಒಂದು ಎಮ್ಮೆ ಮಿರಿ ಮಿರಿ ಮಿಂಚುತ್ತವೆ. ಮುಖಕ್ಕೆ ಮುಖವಾಡ, ಕವಡಿಯಿಂದ ತಯಾರಿಸಿದ್ದ ಸರ, ಗೆಜ್ಜೆ, ಗಂಟೆ, ಹಂಗಡ ಕಟ್ಟಲಾಗಿತ್ತು. ಇನ್ನು ಬಣ್ಣ ಬಳಿದಿದ್ದ ಕೋಡುಗಳಿಗೆ ನವಿಲು ಗರಿ, ಬೆಳ್ಳಿಯ ಕಳಸ ಕೂಡ ಧರಿಸಿದ್ದು ಎಲ್ಲರ ಗಮನ ಸೆಳೆಯಿತು.

ಬೈಕ್​ಗಳ ಸೈಲೆನ್ಸರ್‌ ತೆಗೆದು ಕರ್ಕಶ ಶಬ್ಧ ಮಾಡುತ್ತಾ ಕೆಲ ಯುವಕರು ವೇಗವಾಗಿ ಬೈಕ್‌ ಓಡಿಸಿದರೆ, ಎಮ್ಮೆಗಳು ಅವರ ಹಿಂದೆ ಓಡಿ ಬರುತ್ತಿದ್ದ ದೃಶ್ಯ ನೋಡುಗರ ಮೈನವಿರೇಳಿಸುವಂತೆ ಮಾಡಿತು. ಇನ್ನು ಕೆಲ ಯುವಕರು ಎಮ್ಮೆಗಳ ಮುಖಕ್ಕೆ ಕಂಬಳಿ ನೆವರಿಸುತ್ತಿದ್ದರು. ಇದರಿಂದ ಅವು ಮತ್ತಷ್ಟು ಕೋಪಗೊಂಡು ಓಡುತ್ತಿದ್ದವು. ಎಮ್ಮೆಗಳ ರೋಷಾವೇಷದ ಈ ದೃಶ್ಯಗಳನ್ನು ಮಕ್ಕಳು, ಯುವಕ-ಯುವತಿಯರು, ಮಹಿಳೆಯರು ಸಖತ್ ಎಂಜಾಯ್ ಮಾಡಿದರು.

ಇಲ್ಲಿನ ಚವ್ಹಾಟ ಮಂದಿರವನ್ನು ಎಮ್ಮೆಗಳು ಸುತ್ತು ಹಾಕಿದವು. ರಸ್ತೆ ಪಕ್ಕ ಎಮ್ಮೆಗಳು ಓಡುವುದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಜನ ಕಿಕ್ಕಿರಿದು ಸೇರಿದ್ದರು. ಆದರೆ, ಎಮ್ಮೆಗಳು ಯಾವೊಬ್ಬರ ಮೇಲೂ ದಾಳಿ ಮಾಡಲಿಲ್ಲ. ಯಾಕೆಂದರೆ ಎಮ್ಮೆಗಳು ತನ್ನ ಮಾಲೀಕನ ಅಣತಿಯಂತೆ ಓಡಾಡುತ್ತವೆ. ಇಷ್ಟು ವರ್ಷಗಳಲ್ಲಿ ಯಾರಿಗೂ ಎಮ್ಮೆಗಳು ಗಾಯಗೊಳಿಸಿದ ಉದಾಹರಣೆ ಇಲ್ಲ ಎನ್ನುತ್ತಾರೆ ಆಯೋಜಕರು.

ಮಾಜಿ ಶಾಸಕ ಅನಿಲ ಬೆನಕೆ ಮಾತನಾಡಿ, "ನಾವೆಲ್ಲಾ ಹೇಗೆ ಹೊಸ ಬಟ್ಟೆ ಧರಿಸಿ ದೀಪಾವಳಿ ಆಚರಿಸುತ್ತೇವೋ, ಅದೇ ರೀತಿ ಎಮ್ಮೆಗಳಿಗೂ ಈ ದಿನ ರೈತಾಪಿ ವರ್ಗ ಸುಂದರವಾಗಿ ಅಲಂಕರಿಸಿ ಸಂತಸ ಪಡುವುದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಭಾರತೀಯ ಸಂಸ್ಕೃತಿ ಉಳಿಸಿ, ಬೆಳೆಸುವ ಕೆಲಸ ಮಾಡುತ್ತಿರುವ ಬೆಳಗಾವಿ ಜನರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ" ಎಂದು ಹೇಳಿದರು.

"ರೈತರ ಜೀವನ ನಡೆಯುವುದೇ ಎಮ್ಮೆ ಮತ್ತು ಹಸುಗಳ ಮೇಲೆ. ಮನೆಯ ಅರ್ಧ ಖರ್ಚನ್ನು ಒಂದು ಎಮ್ಮೆ ನಿಭಾಯಿಸುತ್ತದೆ. ಎಮ್ಮೆ ಮತ್ತು ರೈತರಿಗೂ ಅವಿನಾಭಾವ ಸಂಬಂಧವಿದೆ. ಹಾಗಾಗಿ, ಈ ದಿನ ಶೃಂಗರಿಸಿ ಸಂಭ್ರಮಿಸುತ್ತೇವೆ" ಎನ್ನುತ್ತಾರೆ ರೈತ ರಾಜು ಬೆಲ್ಲದ.

ಚವ್ಹಾಟ ಗಲ್ಲಿ ಅಷ್ಟೇ ಅಲ್ಲದೇ ನಗರದ ಕ್ಯಾಂಪ್‌ ಪ್ರದೇಶ, ಟಿಳಕವಾಡಿಯ ಗೌಳಿ ಗಲ್ಲಿ, ಗೊಂಧಳಿ ಗಲ್ಲಿ, ಗಾಂಧಿ ನಗರ, ವಡಗಾವಿ, ಕೋನವಾಳ ಗಲ್ಲಿ, ಶುಕ್ರವಾರ ಪೇಟೆ, ಬೆಳಗಾವಿ ತಾಲೂಕಿನ ಬಸವನ ಕುಡಚಿ ಸೇರಿ ವಿವಿಧೆಡೆ ಎಮ್ಮೆಗಳನ್ನು ಬೆದರಿಸಲಾಯಿತು. ಒಟ್ಟಾರೆ ಬೆಳಗಾವಿ ರೈತರು ನಮ್ಮ ಎಮ್ಮೆ, ನಮ್ಮ ಹೆಮ್ಮೆ ಎಂದು ಸಂಭ್ರಮಿಸಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ:ದಾವಣಗೆರೆಯ ಈ ಗ್ರಾಮದಲ್ಲಿ 200 ವರ್ಷಗಳಿಂದ ದೀಪಾವಳಿ ಆಚರಿಸುತ್ತಿಲ್ಲ: ಬೆಳಕಿನ ಹಬ್ಬ ಇವರಿಗೆ ಕರಾಳ ದಿನ!

Last Updated : Nov 2, 2024, 8:27 PM IST

ABOUT THE AUTHOR

...view details