ಬೆಳಗಾವಿ: ಬೆಳಗಾವಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಇದೇ ಮೊದಲ ಬಾರಿ ಇಂದು ಬೆಳಗಾವಿಯಲ್ಲಿ ಮತ ಚಲಾಯಿಸಿದರು. ಇದಕ್ಕೂ ಮುನ್ನ ಶೆಟ್ಟರ್ ತಮ್ಮ ತವರು ಕ್ಷೇತ್ರ ಹುಬ್ಬಳ್ಳಿಯಲ್ಲೇ ಮತ ಚಲಾಯಿಸುತ್ತಿದ್ದರು. ಆದರೆ, ಬೆಳಗಾವಿ ಅಭ್ಯರ್ಥಿಯಾದ ಬಳಿಕ ತಮ್ಮ ಮತವನ್ನು ಅಲ್ಲಿಗೆ ವರ್ಗಾಯಿಸಿಕೊಂಡಿದ್ದಾರೆ.
ಸೊಸೆ ಶ್ರದ್ಧಾ ಶೆಟ್ಟರ್, ಸಂಸದೆ ಮಂಗಲ ಅಂಗಡಿ ಅವರ ಜೊತೆಗೆ ವಿಶ್ವೇಶ್ವರಯ್ಯ ನಗರದ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆ ಸಂಖ್ಯೆ 26ರ ಮತಗಟ್ಟೆಗೆ ಆಗಮಿಸಿದ ಶೆಟ್ಟರ್, ಸರತಿ ಸಾಲಿನಲ್ಲಿ ನಿಂತು ಮತ ಹಾಕಿದರು. ಮತಗಟ್ಟೆಯಿಂದ ಹೊರಬಂದ ಬಳಿಕ ವಿಜಯದ ಸಂಕೇತ ಪ್ರದರ್ಶಿಸಿದರು.
ಮತ ಹಾಕಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶೆಟ್ಟರ್, "ಅಧಿಕ ಸಂಖ್ಯೆಯಲ್ಲಿ ಜನರು ಆಗಮಿಸಿ ಮತ ಚಲಾಯಿಸುತ್ತಿದ್ದಾರೆ. ಮತದಾನದ ಮಹತ್ವದ ಬಗ್ಗೆ ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿದೆ. ಆದರೆ ಕೆಲ ಪಕ್ಷಗಳು ಕಳೆದ ಎರಡು ದಿನಗಳಿಂದ ಹಣ ಹಂಚುವುದು ಬಿಟ್ಟರೆ, ಮತದಾರರನ್ನು ಮನವೊಲಿಸುವ ಕೆಲಸ ಮಾಡಲಿಲ್ಲ. ಹಣದ ಹಂಚಿಕೆ ಮೇಲೆಯೇ ಗೆಲ್ಲುವ ಭ್ರಮೆಯಲ್ಲಿದ್ದಾರೆ. ಆದರೆ, ಮತದಾರರು ಅವರನ್ನು ತಿರಸ್ಕರಿಸಿ, ಸೂಕ್ತ ಉತ್ತರ ಕೊಡುತ್ತಾರೆ. ಹಣ ಮತ್ತು ಅಧಿಕಾರದ ಬಲದ ಮೇಲೆ ಪ್ರಜಾತಂತ್ರ ವ್ಯವಸ್ಥೆ ನಡೆಯುವುದಿಲ್ಲ" ಎಂದು ತಿರುಗೇಟು ಕೊಟ್ಟರು.
"ನಿಮ್ಮ ಸಾಧನೆ ಮತ್ತು ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಿಳಿಸಬೇಕಿತ್ತು. ಆದರೆ, ಸೋಲಿನ ಭೀತಿ ಮತ್ತು ಹತಾಶೆಯಿಂದ ಹಣ ಹಂಚಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಒಂದು ದೂರು ಕೊಟ್ಟಿದ್ದೇವೆ. ಸಂಬಂಧಿಸಿದ ಅಧಿಕಾರಿಗಳು ಗಂಭೀರ ಕ್ರಮ ತೆಗೆದುಕೊಳ್ಳಬೇಕಿದೆ" ಎಂದು ಶೆಟ್ಟರ್ ಆಗ್ರಹಿಸಿದರು.
"ಕಳೆದ ಒಂದು ತಿಂಗಳಿನಿಂದ ಬೆಳಗಾವಿಯಲ್ಲಿ ಪ್ರಚಾರ ಮಾಡುತ್ತಿದ್ದೇನೆ. ನಮಗೆ ದಿನದಿಂದ ದಿನಕ್ಕೆ ಬೆಂಬಲ ಹೆಚ್ಚಾಗುತ್ತಿದೆ. ಅಲ್ಲದೇ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗಬೇಕೆನ್ನುವ ಇಚ್ಛೆ ಜನರದ್ದು. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಜನರು ಆಗಮಿಸುತ್ತಿದ್ದಾರೆ. ಇನ್ನೂ ಜಿಲ್ಲೆಯಲ್ಲಿ ಬಿಸಿಲಿನ ಆರ್ಭಟ ಜೋರಾಗಿದೆ. ಹಾಗಾಗಿ, ಬೇಗ ಬೇಗನೇ ಆಗಮಿಸಿ ಮತ ಚಲಾಯಿಸಿ" ಎಂದು ಶೆಟ್ಟರ್ ಕೋರಿದರು.