ಬೆಂಗಳೂರು: ನಾಳೆ ಅರಮನೆ ಮೈದಾನದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಸರ್ಕಾರದ ವೈಫಲ್ಯಗಳ ವಿರುದ್ಧ ನಡೆಸಬೇಕಾದ ಹೋರಾಟಗಳ ಕುರಿತು ಚರ್ಚೆ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.
ಬಿಜೆಪಿ ಕಾರ್ಯಕಾರಿಣಿ ಸಭೆ ಶನಿವಾರ ನಡೆಯಲಿರುವ ಹಿನ್ನೆಲೆ ಸಭೆಯ ಪೂರ್ವಸಿದ್ಧತಾ ಕಾರ್ಯವನ್ನು ವಿಜಯೇಂದ್ರ ಪರಿಶೀಲಿಸಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ಪರ ವಾತಾವರಣ ಇದೆ. ಸಭೆಯಲ್ಲಿ ಮೋದಿಯವರ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಕುರಿತು ಚರ್ಚಿಸಲಾಗುವುದು. ಲೋಕಸಭೆ ಚುನಾವಣೆ ಎದುರಿಸಲು ಬೇಕಾದ ಕಾರ್ಯತಂತ್ರ, ಕಾರ್ಯಕ್ರಮಗಳನ್ನು ರೂಪಿಸುತ್ತೇವೆ. ಕೇಂದ್ರ ಸಚಿವ ಭೂಪೇಂದ್ರ ಯಾದವ್ ಕಾರ್ಯಕಾರಿಣಿ ಉದ್ಘಾಟನೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಶನಿವಾರ ಬೆಳಗ್ಗೆ 10.30ರಿಂದ ಬಿಜೆಪಿ ಕಾರ್ಯಕಾರಿಣಿ ಸಭೆ ಆರಂಭ ಆಗುತ್ತದೆ. ರಾಜ್ಯದ ಬಿಜೆಪಿ ಪದಾಧಿಕಾರಿಗಳ ನೇಮಕದ ಬಳಿಕ ಮೊದಲ ಸಭೆ ಇದಾಗಿದೆ. 900ಕ್ಕೂ ಹೆಚ್ಚು ನಮ್ಮ ಪಕ್ಷದ ಮುಖಂಡರು ಬರಲಿದ್ದಾರೆ. ಪಕ್ಷದ ಹಿರಿಯ ನಾಯಕರು ಮಾಜಿ ಸಿಎಂಗಳು ವೇದಿಕೆಯಲ್ಲಿ ಇರಲಿದ್ದಾರೆ. ನನ್ನ ಮುಂದಿರುವ ದೊಡ್ಡ ಗುರಿ ಲೋಕಸಭಾ ಚುನಾವಣೆ ಅಷ್ಟೇ, ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಚುನಾವಣೆ ಸಂಬಂಧ ಮುಂದಿನ ಎಲ್ಲ ಕಾರ್ಯ ಯೋಜನೆ ಕುರಿತು ನಾಳಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಲೋಕಸಭೆ 28 ಸ್ಥಾನ ಗೆಲ್ಲುವ ಗುರಿ:ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಆಗಿದ್ದಾರೆ. ಮುಂದಿನ ಗುರಿ ಲಕ್ಷ್ಮಣ ಸವದಿ ಅವರೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ನಾನು ಯಾವುದೇ ನಿಶ್ಚಿತ ಗುರಿ ಇಟ್ಟುಕೊಂಡು ಹೋಗುತ್ತಿಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುವುದೇ ನನ್ನ ಗುರಿ. 28 ಸ್ಥಾನ ಗೆಲ್ಲುವ ಬಗ್ಗೆ ಮಾಧ್ಯಮದವರಿಗೆ ತಮಾಷೆಯಾಗಿ ಕಾಣಬಹುದು. ಆದರೆ, ನಾವು ಗುರಿಯೊಂದಿಗೆ ಮುನ್ನಡೆಯುತ್ತಿದ್ದೇವೆ. ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ ಮಾಡುತ್ತೇವೆ. ಪಕ್ಷದ ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತ ಕೋರುತ್ತೇವೆ ಎಂದು ಅಭಿಪ್ರಾಯ ತಿಳಿಸಿದರು.