ಬೆಂಗಳೂರು: ಪ್ರತಿಯೊಂದು ಚುನಾವಣೆಯೂ ನಮಗೆ ಸವಾಲಾಗಿಯೇ ಇರಲಿದೆ. ಹಿಂದೆ ಯಡಿಯೂರಪ್ಪ ನೇತೃತ್ವದಲ್ಲಿ ಲೋಕಸಭಾ ಚುನಾವಣೆಯಲ್ಲಿ 26 ಸ್ಥಾನ ಗೆದ್ದಿದ್ದೇವೆ. ಈ ಬಾರಿ 28 ಸ್ಥಾನ ಗೆದ್ದು, ದುಷ್ಟ ಭ್ರಷ್ಟ ದುರಹಂಕಾರಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕರೆ ನೀಡಿದ್ದಾರೆ.
ಮಲ್ಲೇಶ್ವರದ ಹವ್ಯಕ ಭವನದಲ್ಲಿ ನಡೆದ ಒಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ರಾಜ್ಯದ ವಿರೋಧಿ ಎಂದು ಸಿಎಂ ಸಿದ್ದರಾಮಯ್ಯ ಬಿಂಬಿಸುತ್ತಿದ್ದಾರೆ. ರಾಜ್ಯದ ಹಿತದೃಷ್ಟಿಯಿಂದ ಇದು ಗಂಡಾಂತರ ತರುವಂತಹ ಘಟನೆಯಾಗಿದೆ. ನೂರು ಸುಳ್ಳು ಹೇಳಿ ಒಂದು ಮದುವೆ ಮಾಡಿದಂತೆ ನೂರು ಸುಳ್ಳು ಹೇಳಿ ಕಾಂಗ್ರೆಸ್ನವರು ಅಧಿಕಾರಕ್ಕೆ ಬಂದಿದ್ದಾರೆ. ಎಂಟು ಒಂಬತ್ತು ತಿಂಗಳಲ್ಲಿ ಜನಪ್ರಿಯತೆ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಯಾವುದೇ ಹೊಸ ಯೋಜನೆ ಘೋಷಣೆ ಮಾಡಿಲ್ಲ. ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ. ರಾಜ್ಯ ಸರ್ಕಾರಕ್ಕೆ ಎಷ್ಟರಮಟ್ಟಿಗೆ ದಾರಿದ್ರ್ಯ ಬಂದಿದೆ ಅಂದರೆ ದೇವಸ್ಥಾನ ಹುಂಡಿಗೆ ಕೈ ಹಾಕುವ ಪರಿಸ್ಥಿತಿ ಬಂದಿದೆ. ಇಂತಹ ಕೆಟ್ಟ ಪರಿಸ್ಥಿತಿಯನ್ನು ಸರ್ಕಾರಕ್ಕೆ ಕಾಂಗ್ರೆಸ್ ತಂದೊಡ್ಡಿದೆ. ಇನ್ನೂ ನಾಲ್ಕು ವರ್ಷ ಅಧಿಕಾರ ನಡೆಸಿದರೆ ಇವರು ರಾಜ್ಯವನ್ನು ಯಾವ ಪರಿಸ್ಥಿತಿಗೆ ತಗೊಂಡು ಹೋಗ್ತಾರೆ..? ಉಚಿತ ಪ್ರಯಾಣದಿಂದ ಮಹಿಳೆಯರು ಖುಷಿ ಆಗಿದ್ದಾರೆ, ಅದಕ್ಕೆ ನಮ್ಮದೇನು ತಕರಾರು ಇಲ್ಲ. ಆದರೆ ಪುರುಷರು ಸಾಮಾನ್ಯ ಬಸ್ನಲ್ಲಿ ಸೀಟು ಸಿಗದೆ ಡಬಲ್ ಚಾರ್ಜ್ ಕೊಟ್ಟು ಪ್ರೀಮಿಯಂ ಬಸ್ಸಿನಲ್ಲಿ ಹೋಗುತ್ತಿದ್ದಾರೆ ಎಂದರು.