ಬೆಂಗಳೂರು:ಪ್ಲಾಸ್ಟಿಕ್ ತ್ಯಾಜ್ಯ, ಇ -ತ್ಯಾಜ್ಯ, ಜೈವಿಕ ವೈದ್ಯಕೀಯ ತ್ಯಾಜ್ಯ, ಘನ ತ್ಯಾಜ್ಯ ನಿರ್ವಹಣೆ ಅತಿ ದೊಡ್ಡ ಸವಾಲಾಗಿದ್ದು, ಈ ಎಲ್ಲ ತ್ಯಾಜ್ಯಗಳ ನಿಯಂತ್ರಣ, ನಿರ್ವಹಣೆಗೆ ತಿಂಗಳಿಗೆ ಒಂದರಂತೆ 12 ಜಾಗೃತಿ ಮಾಸಾಚರಣೆ ನಡೆಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ. ಖಂಡ್ರೆ ತಿಳಿಸಿದ್ದಾರೆ.
ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಇಂದು ನಡೆದ ವಿಶ್ವ ಪರಿಸರ ದಿನ ಮತ್ತು ವನಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಅವರು, ವರ್ಷದ 12 ತಿಂಗಳಲ್ಲಿ ಆಯಾ ತಿಂಗಳ ಘೋಷಿತ ತ್ಯಾಜ್ಯಕ್ಕೆ ಹೆಚ್ಚಿನ ಒತ್ತು ನೀಡಿ, ಅವುಗಳ ವೈಜ್ಞಾನಿಕ ನಿರ್ವಹಣೆ, ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು ಮತ್ತು ತಪಾಸಣೆ ನಡೆಸಿ, ದಂಡವನ್ನೂ ವಿಧಿಸಲಾಗುವುದು ಎಂದು ಹೇಳಿದರು.
12ನೇ ಶತಮಾನದಲ್ಲಿಯೇ ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರು ಒಲೆ ಹೊತ್ತಿ ಉರಿದರೆ ನಿಲ್ಲಬಹುದಲ್ಲದೇ, ಧರೆ ಹೊತ್ತಿ ಉರಿದರೆ ನಿಲ್ಲಬಹುದೇ ಎಂದು ಎಚ್ಚರಿಕೆ ನೀಡಿದ್ದರು. ಇಂದು ಅಕ್ಷರಶಃ ಧರೆ ಹೊತ್ತಿ ಉರಿಯುತ್ತಿದೆ. ಪ್ರಕೃತಿ ಪರಿಸರ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ, ಇತ್ತೀಚೆಗೆ ಅತಿಯಾದ ಬಿಸಿಲ ತಾಪದಿಂದಾಗಿ ಭಾರತದಲ್ಲೂ ಸಾವಿರಾರು ಜನರು ಸೌರಾಘಾತಕ್ಕೆ ಈಡಾದರು, ನೂರಾರು ಜನರು ಮೃತಪಟ್ಟರು, ಹಜ್ ಯಾತ್ರೆಗೆ ಹೋದ ಸಾವಿರಕ್ಕೂ ಹೆಚ್ಚು ಜನರು ಉರಿಬಿಸಿಲ ತಾಪಕ್ಕೆ ಅಸುನೀಗಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ನಾವು ಮರ ಬೆಳೆಸುವ ಮೂಲಕ ತಾಪಮಾನ ಏರಿಕೆಯನ್ನು ತಡೆಯಬೇಕು. ಈ ಬಾರಿಯ ವಿಶ್ವ ಪರಿಸರ ದಿನದ ಧ್ಯೇಯ ಭೂ ಪುನಶ್ಚೇತನ, ಬರ ನಿರ್ವಹಣೆ ಮತ್ತು ಬರಡು ಭೂಮಿ ಚೇತರಿಕೆ ಎಂಬುದಾಗಿದ್ದು, ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವನಾದ ಬಳಿಕ ರಾಜ್ಯದ ಹಸಿರು ವ್ಯಾಪ್ತಿ ಹೆಚ್ಚಿಸಲು 5 ಕೋಟಿ ಸಸಿ ನೆಡುವ ಘೋಷಣೆ ಮಾಡಿದ್ದೆ. ಇಲಾಖೆ ಸುಮಾರು 5 ಕೋಟಿ 43 ಲಕ್ಷ ಸಸಿ ನೆಟ್ಟು ಗುರಿ ಮೀರಿದ ಸಾಧನೆ ಮಾಡಿದೆ. ಆದರೆ ಹೀಗೆ ನೆಟ್ಟ ಸಸಿಗಳ ಪೈಕಿ ಎಷ್ಟು ಬದುಕುಳಿದಿದೆ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದ್ದು, ಆಡಿಟ್ ಕೂಡ ಮಾಡಿಸಲಾಗುತ್ತಿದೆ ಎಂದು ಸಚಿವ ಖಂಡ್ರೆ ತಿಳಿಸಿದರು.