ಸಾಮಾಜಿಕ ಕಾರ್ಯಕರ್ತ ಲೋಕೇಶ್ ಅಲುಂಬುಡ ಮಾಹಿತಿ (ETV Bharat) ಪುತ್ತೂರು:ಕೆಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ಧ ಪ್ರಾಚೀನ ಕೆರೆಗೆ ಹೊಸರೂಪ ನೀಡಲಾಗುತ್ತಿದ್ದು ಊರಿಗೆ ಊರೇ ಸಂಭ್ರಮದಲ್ಲಿದೆ. ಪುತ್ತೂರು ಸೀಮೆಯ ಬನ್ನೂರು ಗ್ರಾಮದ ಅಲುಂಬುಡ ಎಂಬಲ್ಲಿ ಪ್ರಾಚೀನ ಬಾವದ ಕೆರೆ ಇದೆ. ಇದೀಗ ಈ ಕೆರೆಗೆ ಕಾಯಕಲ್ಪದ ಯೋಗ ಕೂಡಿಬಂದಿದೆ.
15ನೇ ಹಣಕಾಸು ನಿಧಿಯಡಿಯಲ್ಲಿ ಸರಕಾರದಿಂದ ಮಂಜೂರಾದ 38 ಲಕ್ಷ ರೂ. ಅನುದಾನ ಮತ್ತು ಮಿಲಿಯನ್ ಪ್ಲಸ್ ಸಿಟಿ ಯೋಜನೆಯಲ್ಲಿ ಮಂಜೂರಾದ 40 ಲಕ್ಷ ರೂ. ಅನುದಾನದಲ್ಲಿ ಕೆರೆಯ ಸಮಗ್ರ ಜೀರ್ಣೋದ್ಧಾರ ಕಾರ್ಯ ಶುರುವಾಗಿದೆ.
ಈ ಕೆರೆಯ ಅಭಿವೃದ್ಧಿಗಾಗಿ ಸ್ಥಳೀಯರು ಅನೇಕ ವರ್ಷಗಳಿಂದ ಬೇಡಿಕೆ ಮುಂದಿಟ್ಟು ಹೋರಾಟ ನಡೆಸಿದ್ದರು. ಇದರ ಫಲವಾಗಿ 2013ರಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಹೂಳೆತ್ತಿ ಒಂದು ಭಾಗಕ್ಕೆ ತಡೆಗೋಡೆ ಕಟ್ಟಲಾಗಿತ್ತು. ಬಳಿಕ ನಿರ್ಲಕ್ಷ್ಯಕ್ಕೊಳಗಾದ ಕಾರಣ ಕೆರೆಯಲ್ಲಿ ಹೂಳು ತುಂಬಿ ಮುಚ್ಚಿ ಹೋಗುವ ಹಂತ ತಲುಪಿತ್ತು. ಆದರೆ ಇದೀಗ ಕೆರೆ ನೀರನ್ನು ಕಳೆದ ವಾರ ಸತತ 2 ದಿನ ಪಂಪ್ ಮೂಲಕ ಹೊರತೆಗೆಯಲಾಗಿದೆ.
ಅದೂ ಅಸಾಧ್ಯವಾದಾಗ ಕೆರೆಯಿಂದಲೇ ಕಾಲುವೆ ತೋಡಿ ನೀರನ್ನು ಪಕ್ಕದ ತೋಡಿಗೆ ಬಿಡಲಾಯಿತು. ಪ್ರಸ್ತುತ ಕೆರೆಯ ಹೂಳೆತ್ತುವ ಕಾರ್ಯ ನಡೆಯುತ್ತಿದೆ. ಕೆಸರನ್ನು ಬದಿಯಲ್ಲಿ ರಾಶಿ ಹಾಕಲಾಗುತ್ತಿದೆ. ನೀರಿನ ಅಂಶ ಇಳಿದ ಮೇಲೆ ಬನ್ನೂರು ಡಂಪಿಂಗ್ ಯಾರ್ಡ್‌ಗೆ ಸ್ಥಳಾಂತರಿಸಲಾಗುತ್ತದೆ. ಬಳಿಕ ಕೆರೆಯನ್ನು ಸುಮಾರು 3 ಮೀಟರ್‌ನಷ್ಟು ಅಳ ಮಾಡಿ ಸುತ್ತಲೂ ಕಲ್ಲಿನ ತಡೆಗೋಡೆ ಕಟ್ಟಲಾಗುತ್ತದೆ. ಪೂರ್ವ ದಿಕ್ಕಿನಲ್ಲಿ ಕೆರೆಗಿಳಿಯಲು ಸುಂದರ ಮೆಟ್ಟಿಲು ನಿರ್ಮಿಸಲಾಗುತ್ತದೆ. ನಾಲ್ಕೂ ದಿಕ್ಕುಗಳಲ್ಲಿ ತಲಾ 5 ಮೀಟರ್ ಪ್ಯಾಸೇಜ್ ಕಲ್ಪಿಸಲಾಗುತ್ತದೆ.
ಸದ್ಯ ಕೆರೆ ಸರಕಾರಿ ಜಾಗದಲ್ಲಿದ್ದು, ಅಲುಂಬುಡ ಕೆರೆ ಎಂಬ ಹೆಸರಿನಲ್ಲಿ 84 ಸೆಂಟ್ಸ್ ವಿಸ್ತೀರ್ಣ ಹೊಂದಿದೆ. ಶುಕ್ರವಾರ ಸರ್ವೆ ಅಧಿಕಾರಿಗಳು ಆಗಮಿಸಿ ಕೆರೆಯ ವಿಸ್ತೀರ್ಣದ ಮರು ಸರ್ವೆ ನಡೆಸಿದ್ದಾರೆ.
ಬಾವದ ಕೆರೆಯಲ್ಲಿ ಜೀರ್ಣೋದ್ಧಾರ ಕಾರ್ಯ (ETV Bharat) ಬಾವದ ಕೆರೆ ಪ್ರಾಚೀನ ಹಿನ್ನೆಲೆ:ಇದು ದೈವಿಕ ಹಿನ್ನೆಲೆ ಇರುವ ಕೆರೆ. ಜೊತೆಗೆ ಪ್ರಾಚೀನ ಕೆರೆಯೂ ಹೌದು. ರಾಜರ ಕಾಲದಲ್ಲಿ ವಿಶೇಷ ಮಾನ್ಯತೆ ಇತ್ತು. ಬಾವದ ಕೆರೆ ಅಥವಾ ಬಾವುದ ಕೆರೆ ಎಂದು ತುಳುವಲ್ಲಿ ಕರೆಯಲಾಗುತ್ತದೆ. ಸಮೀಪ ಆನೆಮಜಲು ಪ್ರದೇಶವಿದ್ದು, ರಾಜರ ಕಾಲದಲ್ಲಿ ಇಲ್ಲಿ ಆನೆಗಳನ್ನು ಕಟ್ಟಲಾಗುತ್ತಿತ್ತಂತೆ. ಅಷ್ಟೇ ಅಲ್ಲ, ಈ ಕೆರೆಗೆ ಸೂತಕದವರು ಮತ್ತು ಮಹಿಳೆಯರು ಇಳಿಯಬಾರದು. ಕೆರೆಯ ಮೀನುಗಳನ್ನು ಹಿಡಿಯಬಾರದು. ಒಂದು ವೇಳೆ ಹಿಡಿದರೆ ಕೆರೆಯ ನೀರು ರಕ್ತವರ್ಣಕ್ಕೆ ತಿರುಗುತ್ತದೆ ಎಂಬ ನಂಬಿಕೆ ಇದೆ.
ಶತಮಾನದ ಹಿಂದೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಅವಭೃತ ಸವಾರಿ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದಾಗ ಕೆರೆಯ ಕೂದಲಳತೆ ದೂರದಲ್ಲಿ ದೇವರ ಕಟ್ಟೆಪೂಜೆ ನಡೆಯುತ್ತಿತ್ತು. ಪೂಜೆ ನಡೆಯುತ್ತಿದ್ದ ಅಶ್ವತ್ಥ ಮರ ಈಗಲೂ ಇದೆ. ದೇವರ ಸವಾರಿ ಬೀರಂಗಿಲಕ್ಕೆ ತಿರುಗಿದ ಬಳಿಕ ಇಲ್ಲಿನ ಪೂಜೆ ನಿಂತು ಹೋಯಿತು. ಅನತಿ ದೂರದಲ್ಲಿರುವ ಆನೆಮಜಲು ಬನ ಸಾನಿಧ್ಯ ಮತ್ತು ದೆಯ್ಯೆರೆ ಮಾಡಕ್ಕೂ ಈ ಕೆರೆಗೂ ಅನಾದಿ ಕಾಲದ ಸಂಬಂಧವಿದೆ. ಕೆರೆಯ ದಂಡೆಯ ಮೇಲೆ ಪ್ರಾಚೀನ ನಾಗ ಸಾನಿಧ್ಯವಿದೆ. ನಾಗ ಸಾನಿಧ್ಯ ಪಾಳು ಬಿದ್ದ ಕಾರಣ ಊರಿಗೆ ಕ್ಷೇಮವಿಲ್ಲ ಎಂದು ಕಂಡು ಬಂದ ಬಳಿಕ ವರ್ಷದ ಹಿಂದೆ ನೂತನ ನಾಗ ಸಾನಿಧ್ಯ ಅದೇ ಸ್ಥಳದಲ್ಲೇ ನಿರ್ಮಿಸಿ ಪ್ರತಿಷ್ಠಾಪಿಸಲಾಗಿದೆ. ಇದಾದ ಬಳಿಕವೇ ಪಕ್ಕದ ದೆಯ್ಯೆರೆ ಮಾಡ, ಆನೆಮಜಲು ಬನ ಸಾನಿಧ್ಯ ಜೀರ್ಣೋದ್ಧಾರ ಮಾಡಲು ಸಾಧ್ಯವಾಯಿತು. ಈಗ ಕೆರೆ ಅಭಿವೃದ್ಧಿಗೊಳ್ಳಲು ಕೂಡ ನಾಗದೇವರ ಅಭಯ ಕಾರಣವಂತೆ.
ಇದನ್ನೂ ಓದಿ:ಮೈಸೂರು ಅರಮನೆ ಮುಂಭಾಗ ಪಾರಿವಾಳಗಳಿಗೆ ಧಾನ್ಯ ಚೆಲ್ಲುವುದನ್ನು ನಿಷೇಧಿಸಲು ಡಿಸಿಗೆ ಪತ್ರ - Grain To Pigeons