ರಾಮನಗರ/ಬೆಂಗಳೂರು:ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಇದೇ ಪ್ರಥಮ ಬಾರಿಗೆ ರಾಜ್ಯಕ್ಕೆ ಚುನಾವಣಾ ಚಾಣಿಕ್ಯ ಅಮಿತ್ ಶಾ ಆಗಮಿಸುತ್ತಿದ್ದು, ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಪ್ರಚಾರ ಕಾರ್ಯ ನಡೆಸುವ ನಿಟ್ಟಿನಲ್ಲಿ ಉಭಯ ಪಕ್ಷಗಳ ನಾಯಕರ ನಡುವೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಉಭಯ ಪಕ್ಷಗಳ ನಾಯಕರ ಸಭೆ ಕರೆದಿದ್ದಾರೆ.
ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಪೇಕ್ಷಿತರು ಭಾಗಿಯಾಗಲಿದ್ದಾರೆ. ಅಮಿತ್ ಶಾ ಕರೆದಿರುವ ಬೆಳಗಿನ ಉಪಹಾರ ಸಭೆಯಲ್ಲಿ ಬಿಜೆಪಿಯ 15 ಹಾಗೂ ಜೆಡಿಎಸ್ ನ 8 ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ.
ಈಗಾಗಲೇ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭಗೊಂಡಿದ್ದ ಎಲ್ಲಾ ಕ್ಷೇತ್ರದಲ್ಲಿಯೂ ಜಂಟಿ ಪ್ರಚಾರ ಕಾರ್ಯ ನಡೆಸುವ, ಮಿತ್ರಪಕ್ಷದ ನಾಯಕರು, ಕಾರ್ಯಕರ್ತರ ವಿಶ್ವಾಸಕ್ಕೆ ಪಡೆದುಕೊಂಡು ಒಟ್ಟಾಗಿ ಹೋಗುವ ಕುರಿತು ಚರ್ಚಿಸಲಾಗುತ್ತದೆ. ಮಿತ್ರಪಕ್ಷಗಳ ನಡುವೆ ಇರುವ ಗೊಂದಲ, ಅಸಮಾಧಾನಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಮಿತ್ ಶಾ ಎಲ್ಲರ ಅಭಿಪ್ರಾಯ ಪಡೆದು ಸಮಾಲೋಚನೆ ನಡೆಸಿ ಸಲಹೆ ಸೂಚನೆ ನೀಡಲಿದ್ದಾರೆ.
ಬಿಜೆಪಿ: ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್, ಆರ್.ಅಶೋಕ್, ಪ್ರಹ್ಲಾದ್ ಜೋಶಿ, ಸದಾನಂದಗೌಡ, ಬಸವರಾಜ್ ಬೊಮ್ಮಾಯಿ, ನಳೀನ್ ಕುಮಾರ್ ಕಟೀಲ್, ಗೋವಿಂದ್ ಕಾರಜೋಳ, ಸಿ.ಟಿ ರವಿ, ಶ್ರೀರಾಮುಲು, ಸಿ.ಎನ್ ಅಶ್ವಥ್ ನಾರಾಯಣ್, ನಿರ್ಮಲ್ ಕುಮಾರ್ ಸುರಾನಾ, ಜಿ.ವಿ ರಾಜೇಶ್ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಜೆಡಿಎಸ್: ಹೆಚ್.ಡಿ ಕುಮಾರಸ್ವಾಮಿ, ಜಿ.ಟಿ ದೇವೇಗೌಡ, ಬಂಡೆಪ್ಪ ಖಾಶೆಂಪುರ್, ವೆಂಕಟರಾವ್ ನಾಡಗೌಡ, ಪುಟ್ಟರಾಜು, ಸಾ.ರಾ ಮಹೇಶ್, ಹೆಚ್.ಕೆ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಇಂದಿನ ಅಮಿತ್ ಶಾ ಸಭೆಯಲ್ಲಿರಲಿದ್ದಾರೆ.