ಬೆಂಗಳೂರು: ಕಳೆದ ಬಾರಿ 25 ಸ್ಥಾನ ನೀಡಿದ್ದ ರಾಜ್ಯದ ಜನತೆ ಈ ಬಾರಿ ಮೈತ್ರಿಕೂಟಕ್ಕೆ ಎಲ್ಲಾ 28 ಸ್ಥಾನಗಳನ್ನೂ ನೀಡಿ ಆಶೀರ್ವಾದ ಮಾಡಬೇಕು. ದೇಶದ ಆರ್ಥಿಕತೆ 11ನೇ ಸ್ಥಾನದಲ್ಲಿತ್ತು, ಈಗ 5ನೇ ಸ್ಥಾನಕ್ಕೆ ಬಂದಿದೆ. ಮತ್ತೊಮ್ಮೆ ಮೋದಿಯನ್ನು ಗೆಲ್ಲಿಸಿದರೆ ವಿಶ್ವದ 3ನೇ ದೊಡ್ಡ ಆರ್ಥಿಕತೆಯಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಇಂದು ನಗರದ ಅರಮನೆ ಮೈದಾನದಲ್ಲಿ ಶಕ್ತಿಕೇಂದ್ರ ಪ್ರಮುಖರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಲೋಕಸಭೆ ತಯಾರಿಗಾಗಿ ನಾವು ಇಲ್ಲಿ ಸೇರಿದ್ದೇವೆ. ಮೋದಿ ನೇತೃತ್ವದಲ್ಲಿ ಚುನಾವಣಾ ಮೈದಾನದಲ್ಲಿ ಇದ್ದೇವೆ. ಇನ್ನೊಂದು ಕಡೆ ಪರಿವಾರವಾದ, ಭ್ರಷ್ಟಾಚಾರ ತುಂಬಿರುವ ಇಂಡಿಯಾ ಒಕ್ಕೂಟ ಇದೆ. ಎಲ್ಲೇ ಹೋದರೂ ಮೋದಿ ಮೋದಿ ಹೆಸರು ಕೇಳಿ ಬರ್ತಿದೆ. ಕರ್ನಾಟಕದಲ್ಲಿ 2014ರಲ್ಲಿ ಬಿಜೆಪಿಗೆ ಶೇ 43ರಷ್ಟು ಮತ ಕೊಡೋ ಮೂಲಕ ಗೆಲ್ಲಿಸಿದ್ದೀರಿ. ಈ ಸಲ ಶೇ 60ರಷ್ಟು ಮತ ನೀಡುವ ಮೂಲಕ ಎಲ್ಲ 28 ಕ್ಷೇತ್ರಗಳನ್ನೂ ಗೆಲ್ಲಬೇಕು ಎಂದರು.
ನರೇಂದ್ರ ಮೋದಿ ಕಳೆದ 23 ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಗುಜರಾತ್ ಸಿಎಂ ಆಗಿ ನಂತರ ಪ್ರಧಾನಿ ಆಗಿದ್ದಾರೆ. ಈ ಅವಧಿಯಲ್ಲಿ 25 ಪೈಸೆಯಷ್ಟೂ ಭ್ರಷ್ಟಾಚಾರ ಆರೋಪ ಮಾಡಲು ವಿಪಕ್ಷಗಳಿಗೆ ಸಾಧ್ಯವಾಗಲಿಲ್ಲ. ಹತ್ತು ವರ್ಷ ಯುಪಿಎ ಅವಧಿಯಲ್ಲಿ 12 ಲಕ್ಷ ಕೋಟಿ ಮೊತ್ತದ ಅಕ್ರಮ ಆಗಿದೆ, ಡಿ.ಕೆ.ಶಿವಕುಮಾರ್ಗೂ ಭ್ರಷ್ಟಾಚಾರಕ್ಕೂ ಬಿಡದ ನಂಟಿದೆ. ಇಂಥ ಭ್ರಷ್ಟ ಕಾಂಗ್ರೆಸ್ ಮೋದಿ ಎದುರು ನಿಂತಿದೆ. ಭ್ರಷ್ಟಾಚಾರ ಮಾಡೋರು ಜನಸೇವೆ ಮಾಡಲ್ಲ. ಬಡ ಕುಟುಂಬದ ಮಹಿಳೆಯರಿಗೆ ಮೋದಿ ಉಜ್ವಲ ಗ್ಯಾಸ್ ಕೊಟ್ಟಿದ್ದಾರೆ. 14 ಲಕ್ಷ ಜನರಿಗೆ ನಲ್ಲಿ ನೀರು, 60 ಲಕ್ಷ ಬಡವರಿಗೆ 5 ಲಕ್ಷದವರೆಗೆ ವಿಮೆ, 370ನೇ ವಿಧಿ ರದ್ದು ಮಾಡಿ ಬಡವರಿಗೆ ಹೊಸ ಜೀವನೋತ್ಸಾಹ ತುಂಬಿದವರು ಮೋದಿ. ಕಾಂಗ್ರೆಸ್ 370 ಸೆಕ್ಷನ್ ರದ್ದು ಮಾಡುವುದರ ವಿರುದ್ಧ ಇತ್ತು ಈ ತೀರ್ಮಾನ ಮಾಡಿದರೆ ರಕ್ತದ ಹೊಳೆ ಹರಿಯುತ್ತದೆ ಅಂದರು ಈಗ ಕಾಶ್ಮೀರದಲ್ಲಿ ಒಂದು ಸಣ್ಣ ಕಲ್ಲು ಸಹ ಹೊಡೆಯಲಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಐವತ್ತು ವರ್ಷದಿಂದ ರಾಮಲಲ್ಲ ವಿಚಾರ ಬಗೆಹರಿಸಿರಲಿಲ್ಲ. ಮೋದಿಯವರು ರಾಮಮಂದಿರ ಕಟ್ಟಿ, ರಾಮನ ಪ್ರಾಣ ಪ್ರತಿಷ್ಠಾಪನೆಯನ್ನೂ ಮಾಡಿದರು. ಈಗ ಗಗನಚುಂಬಿ ಕಟ್ಟಡದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಮಾಡಿದ್ದೇವೆ. ಸೋನಿಯಾ, ರಾಹುಲ್, ಮಲ್ಲಿಕಾರ್ಜುನ ಖರ್ಗೆ ಎಲ್ಲರಿಗೂ ಪ್ರಾಣ ಪ್ರತಿಷ್ಠಾಪನೆಗೆ ಆಹ್ವಾನ ಇತ್ತು. ವೋಟ್ ಬ್ಯಾಂಕ್ ಹೋಗಿ ಬಿಡುತ್ತದೆ ಅನ್ನೋ ಭಯದಿಂದ ಅವರು ಬರಲಿಲ್ಲ. ಮೋದಿ ಸಿಎಎ ತಂದರು, ಇದಕ್ಕೂ ವಿರುದ್ಧವಾಗಿದ್ದರು. ಕಾಂಗ್ರೆಸ್ ನವರು, ಸಿದ್ದರಾಮಯ್ಯ ಉತ್ತರಿಸಲಿ ಹತ್ತು ವರ್ಷ ಯುಪಿಎ ಅಧಿಕಾರದಲ್ಲಿದ್ದಾಗ ಏನಾಯ್ತು ಎಂದು. ಪಾಕಿಸ್ತಾನದಿಂದ ಬಂದು ಬಾಂಬ್ ಹಾಕಿ ಹೋಗ್ತಿದ್ರು, ಮನಮೋಹನ್ ಸಿಂಗ್ ಮೌನವಾಗಿರ್ತಿದ್ರು, ಮೋದಿಯವರು ಪಾಕಿಸ್ತಾನದ ಒಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿಸಿದ್ರು ಇದು ನಮಗೂ ಅವರಿಗೂ ಇರುವ ವ್ಯತ್ಯಾಸ ಎಂದರು.
ನಾನು ಮೋದಿಯವರ ಜತೆ ನಲವತ್ತು ವರ್ಷದಿಂದ ಇದ್ದೇನೆ. ಮೋದಿ 23 ವರ್ಷಗಳಿಂದ ಸಿಎಂ, ಪಿಎಂ ಆಗಿದ್ದಾರೆ. ಇಡೀ ಜಗತ್ತಿನಲ್ಲಿ ಇಷ್ಟು ವರ್ಷದ ಅಧಿಕಾರದ ಅವಧಿಯಲ್ಲಿ ಒಂದು ದಿನವೂ ರಜೆ ತೆಗೆದುಗೊಳ್ಳದ ನಾಯಕ ಮೋದಿ ಮಾತ್ರ. ರಾಹುಲ್ ಗಾಂಧಿ ಬೇಸಿಗೆ ಬಂತು ಅಂದರೆ ವಿದೇಶಕ್ಕೆ ಹಾರಿಹೋಗ್ತಾರೆ. ಪ್ರತೀ ಆರು ತಿಂಗಳು ಕಾಂಗ್ರೆಸ್ ನವರೇ ರಾಹುಲ್ ಗಾಂಧಿಯವರನ್ನು ಹುಡುಕುತ್ತಿರುತ್ತಾರೆ. ಮೋದಿಗೆ ರಾಹುಲ್ ಸಮ ಅಲ್ವೇ ಅಲ್ಲ, ಇಡೀ ದೇಶ ಒಂದಾಗಿ ಮೋದಿ ಪರ ನಿಂತಿದೆ ಎಂದು ಹೇಳಿದರು.
ಕಾಂಗ್ರೆಸ್ ನವರು ಲೋಕತಂತ್ರ ಉಳಿಸಿ ಅಂತಿದ್ದಾರೆ, ಲೋಕತಂತ್ರಕ್ಕೆ ಏನಾಗಿದೆ?. 2014 ರವರೆಗೆ ಭ್ರಷ್ಟಾಚಾರ ನಡೀತಿತ್ತು ಭ್ರಷ್ಟಾಚಾರಿಗಳಿಗೆ ಜೈಲಿಗೆ ಹಾಕಬೇಕು. ಆ ಕೆಲಸ ಆಗ್ತಿದೆ ಕರ್ನಾಟಕ ಸರ್ಕಾರ ಕೆಲಸ ಮಾಡ್ತಿಲ್ಲ, ಅಭಿವೃದ್ಧಿ ಆಗ್ತಿಲ್ಲ. ಸಿಎಂಗೆ ತಮ್ಮ ಕುರ್ಚಿ ಉಳಿಸಿಕೊಳ್ಳೋದೇ ಕೆಲಸ ಆಗಿದೆ. ಇನ್ನೊಬ್ಬರು ಅವರ ಕುರ್ಚಿ ಎಳೀತಿದ್ದಾರೆ. ಹತ್ತು ವರ್ಷದಲ್ಲಿ ಯುಪಿಎ ರಾಜ್ಯಕ್ಕೆ ಕೊಟ್ಟಿದ್ದು ಕೇವಲ 1.52 ಲಕ್ಷ ಕೋಟಿ ಅನುದಾನ, ಮೋದಿಯವರು ಕಳೆದ ಹತ್ತು ವರ್ಷದಲ್ಲಿ ಕೊಟ್ಟಿದ್ದು 4.91 ಲಕ್ಷ ಕೋಟಿ. ಮೂರು ಪಟ್ಟು ಹೆಚ್ಚು ಅನುದಾನ ಎಂದು ಕೇಂದ್ರ ತಾರತಮ್ಯ ಮಾಡುತ್ತಿದೆ ಎನ್ನುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಇದನ್ನೂ ಓದಿ:"ಹೌ ಈಸ್ ಯುವರ್ ಹೆಲ್ತ್" : ಹೆಚ್ಡಿಕೆ ಆರೋಗ್ಯ ವಿಚಾರಿಸಿದ ಅಮಿತ್ ಶಾ - Amit Shah