ಕರ್ನಾಟಕ

karnataka

ETV Bharat / state

ವಾಲ್ಮೀಕಿ ನಿಗಮ ಹಗರಣದಲ್ಲಿ ಸಿದ್ದರಾಮಯ್ಯ ಹೆಸರು ಹೇಳುವಂತೆ ಒತ್ತಾಯ ಆರೋಪ: ಇಡಿ ಅಧಿಕಾರಿಗಳ ವಿರುದ್ಧದ ಪ್ರಕರಣ ರದ್ದು - CASE AGAINST ED OFFICIALS QUASHED

ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕ ಮನೋಜ್ ಮಿತ್ತಲ್ ಮತ್ತು ಸಹಾಯಕ ನಿರ್ದೇಶಕ ಮುರಳಿ ಕಣ್ಣನ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

Karnataka High Court
ಕರ್ನಾಟಕ ಹೈಕೋರ್ಟ್​ (ETV Bharat)

By ETV Bharat Karnataka Team

Published : Nov 8, 2024, 7:30 PM IST

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರನ್ನು ಹೇಳುವಂತೆ ಒತ್ತಾಯಿಸಿದ್ದ ಆರೋಪ ಸಂಬಂಧ ಜಾರಿ ನಿರ್ದೇಶನಾಲಯದ ಇಬ್ಬರು ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.

ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕ ಮನೋಜ್ ಮಿತ್ತಲ್ ಮತ್ತು ಸಹಾಯಕ ನಿರ್ದೇಶಕ ಮುರಳಿ ಕಣ್ಣನ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಪ್ರಕರಣದ ದೂರುದಾರ ಕಲ್ಲೇಶ್ ಬಿ. ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿ ದೂರನ್ನು ಮತ್ತಷ್ಟು ಮುಂದುವರೆಸಲು ಇಚ್ಚಿಸುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಹೀಗಾಗಿ ಪ್ರಕರಣವನ್ನು ಮುಂದುವರೆಸುವ ಅಗತ್ಯವಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಪ್ರಕರಣ (ಇಸಿಐಆರ್) ನೋಂದಣಿ ಇಲ್ಲದೆಯೇ ವಿಚಾರಣೆ ನಡೆದಿದ್ದರೆ ಇಡಿ ಅಧಿಕಾರಿಗಳು ನಡೆಯ ಸಂಬಂಧ ಅಡ್ವೊಕೇಟ್ ಜನರಲ್ ಮಂಡಿಸಿರುವ ವಾದ ಸ್ವೀಕಾರಕ್ಕೆ ಅರ್ಹವಾಗಿರುತ್ತಿತ್ತು. ಆದರೆ, ಇಡಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ಅದರಂತೆ ದೂರುದಾರ ಕಲ್ಲೇಶ್ ಅವರನ್ನು ತನಿಖೆ ನಡೆಸಿದ್ದಾರೆ. ಜತೆಗೆ, ತನಿಖೆ ಭಾಗವಾಗಿ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಎಲ್ಲ ಪ್ರಶ್ನೆಗಳು ಇಡಿ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ನಡೆದ ತನಿಖೆಯ ವೇಳೆ ಪ್ರಶ್ನಿಸಿರುವುದಾಗಿ ಸಾಕ್ಷ್ಯಾಧಾರಗಳಿಂದ ಗೊತ್ತಾಗಲಿದೆ. ಅಧಿಕಾರಿಗಳು ತಮ್ಮ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸಿದ್ದಾರೆ ಎಂದು ಪೀಠ ಹೇಳಿದೆ.

ಅರ್ಜಿಯ ಸಂಬಂಧ ಈ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಾಗ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಿಸಿದರೆ ಅವರು ತಮ್ಮ ಕರ್ತವ್ಯ ನಿರ್ವಹಿಸಲಾಗುವುದಿಲ್ಲ ಎಂದು ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಅರ್ಜಿದಾರರ ವಿರುದ್ಧದ ಆರೋಪಗಳು, ಅಧಿಕಾರಿಗಳು ತಮ್ಮ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವ ಕಾರ್ಯವಾಗಿದೆ. ಈ ರೀತಿಯಲ್ಲಿ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವಾಗ ಅಂತಹ ಅಧಿಕಾರಿಗಳ ವಿರುದ್ಧ ತನಿಖೆ ಮಾಡಲು ಅನುಮತಿ ನೀಡಿದರೆ ಅದು ಅವರ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವುದಕ್ಕಾಗಿ ಇರುವ ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗುತ್ತದೆ‌. ಜತೆಗೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಅಧಿಕೃತ ಕರ್ತವ್ಯಗಳನ್ನು ನ್ಯಾಯವ್ಯಾಪ್ತಿಯ ಪೊಲೀಸರು ತನಿಖೆ ಮಾಡಬೇಕಾಗುತ್ತದೆ. ಹೀಗಾಗಿ ಅರ್ಜಿದಾರರ ವಿರುದ್ಧ ಪ್ರಕರಣ ಮತ್ತು ಅದರ ಕುರಿತ ಮುಂದಿನ ಎಲ್ಲ ತನಿಖೆಗೆ ಮಧ್ಯಂತರ ತಡೆ ನೀಡಲಾಗಿದೆ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ:ವಾಲ್ಮೀಕಿ ನಿಗಮದ ಹಗರಣ ಸಂಬಂಧ ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಹಿಂದಿನ ಹೆಚ್ಚುವರಿ ನಿರ್ದೇಶಕ ಬಿ. ಕಲ್ಲೇಶ್‌ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಿತ್ತು. ಈ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಲವು ಪ್ರಶ್ನೆಗಳನ್ನು ಕೇಳಿದ್ದು, ಮುಖ್ಯಮಂತ್ರಿ ಪಾತ್ರ ಇರುವುದಾಗಿ ಹೇಳುವಂತೆ ಒತ್ತಾಯಿಸಿದ್ದರು ಎಂಬ ಆರೋಪ ಎದುರಾಗಿತ್ತು.

ಈ ಸಂಬಂಧ ಜಾರಿ ನಿರ್ದೇಶನಾಲಯದ ಇಬ್ಬರು ಅಧಿಕಾರಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 3(5) (ಉದ್ದೇಶ ಪೂರ್ವಕ), 351 (2) (ಕ್ರಿಮಿನಲ್ ಬೆದರಿಕೆ), ಮತ್ತು 352 (ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಈ ಎಫ್‌ಐಆರ್ ಪ್ರಶ್ನಿಸಿ ಇಬ್ಬರೂ ಪ್ರಕರಣವನ್ನು ರದ್ದು ಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ ಜುಲೈ 23 ರಂದು ಮಧ್ಯಂತರ ಆದೇಶ ನೀಡಿತ್ತು. ಜತೆಗೆ, ಅರ್ಜಿದಾರರ ವಿರುದ್ಧದ ತನಿಖೆಗೆ ತಡೆ ನೀಡಿತ್ತು.

ಇದನ್ನೂ ಓದಿ:ಮುಡಾ ಹಗರಣ: 10 ತಿಂಗಳ ಬಳಿಕ ಇಂದು ಮೊದಲ ಸಾಮಾನ್ಯ ಸಭೆ, ಡಿಸಿ ಮತ್ತು ಶಾಸಕರು ಹೇಳಿದ್ದೇನು?

ABOUT THE AUTHOR

...view details