ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣದ ತನಿಖೆಗೆ ಸರ್ಕಾರ ನೀಡಿದ್ದ ಅನುಮತಿ ಹಿಂಪಡೆದಿದ್ದ ಕ್ರಮ ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿತು.
ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ಉಮೇಶ್ ಅಡಿಗ ಅವರಿದ್ದ ವಿಭಾಗೀಯ ಪೀಠ ಬುಧವಾರ ಅರ್ಜಿಯ ವಿಚಾರಣೆ ನಡೆಸಿತು. ಈ ವೇಳೆ ಶಿವಕುಮಾರ್ ಪರ ವಿಡಿಯೋ ಕಾನ್ಫೆರೆನ್ಸ್ ಮೂಲಕ ಹಾಜರಾಗಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಗ್ವಿ, ಅರ್ಜಿಗಳ ದಾಖಲೆಗಳು ಲಭ್ಯವಾಗಿಲ್ಲ ಎಂದು ತಿಳಿಸಿದರು.
ಅಲ್ಲದೆ, ಡಿಕೆಶಿ ಅವರ ವಿರುದ್ಧದ ಪ್ರಕರಣದ ತನಿಖೆಗೆ ಸಿಬಿಐಗೆ ನೀಡಿದ್ದ ಅನುಮೋದನೆ ಹಿಂಪಡೆಯಲಾಗಿದೆ. ಪ್ರಕರಣವನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಹೀಗಿದ್ದರೂ, ಸಿಬಿಐ ಶಿವಕುಮಾರ್ ಅವರಿಗೆ ನೊಟೀಸ್ ನೀಡುತ್ತಿದೆ ಎಂದು ಪೀಠಕ್ಕೆ ವಿವರಿಸಿದರು. ಇದಕ್ಕೆ ನ್ಯಾಯಪೀಠ, ಪ್ರಕರಣದ ಎಲ್ಲ ದಾಖಲೆಗಳನ್ನು ಪ್ರತಿವಾದಿ ವಕೀಲರಿಗೆ ಒದಗಿಸುವಂತೆ ಸೂಚನೆ ನೀಡಿತು. ಜತೆಗೆ, ಈ ಸಂಬಂಧ ಆಕ್ಷೇಪಣೆಗಳಿದ್ದಲ್ಲಿ ಮುಂದಿನ ವಿಚಾರಣೆ ವೇಳಗೆ ಸಲ್ಲಿಸುವಂತೆ ಸೂಚನೆ ನೀಡಿ ವಿಚಾರಣೆಯನ್ನು ಫೆಬ್ರವರಿ 12ಕ್ಕೆ ಮುಂದೂಡಿತು.
ಇದೇ ವೇಳೆ ಯತ್ನಾಳ್ ಪರ ವಕೀಲರು, ಪ್ರಸರಣವನ್ನು ಸಿಬಿಐ ತನಿಖೆಯಿಂದ ಹಿಂಪಡೆದಿದ್ದು, ಲೋಕಾಯುಕ್ತರಿಗೆ ವರ್ಗಾವಣೆ ಮಾಡಲಾಗಿದೆ. ಆದ್ದರಿಂದ ಲೋಕಾಯುಕ್ತರನ್ನು ಪ್ರತಿವಾದಿ ಮಾಡಬೇಕು ಎಂದು ಕೋರಿದರು.