ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 2ನೇ ಆರೋಪಿ ನಟ ದರ್ಶನ್ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ. ವಿಚಾರಣಾಧೀನ ನ್ಯಾಯಾಲಯ ಜಾಮೀನು ತಿರಸ್ಕರಿಸಲು ಸಕಾರಣಗಳನ್ನು ನೀಡಿಲ್ಲ. ಜಪ್ತಿ ಮಾಡಲಾಗಿರುವ ವಸ್ತುಗಳನ್ನು ಪೊಲೀಸರೇ ಸೃಷ್ಟಿಸಿದ್ದಾರೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
"ತನಿಖೆಯ ಸಂದರ್ಭದಲ್ಲಿ ವಶಪಡಿಸಿಕೊಂಡಿರುವ ವಸ್ತುಗಳನ್ನು ಪೊಲೀಸರೇ ಸಿದ್ಧಪಡಿಸಿದ್ದಾರೆ. ಅರ್ಜಿದಾರರಿಗೆ ಬಂದಿರುವ ಫೋನ್ ಕಾಲ್‌ಗಳಲ್ಲಿ ಆರೋಪಿಗಳ ಜೊತೆ ಮಾತನಾಡಿ ಸಂಚು ರೂಪಿಸಿದ್ದಾರೆ ಎಂಬುದು ಸುಳ್ಳು. ಪ್ರತ್ಯಕ್ಷ ಸಾಕ್ಷಾಧಾರರನ್ನು ತನಿಖಾಧಿಕಾರಿಗಳೇ ಸೃಷ್ಠಿ ಮಾಡಿದ್ದಾರೆ. ಅವರ ಹೇಳಿಕೆಗಳನ್ನು ತಡವಾಗಿ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ, ಪ್ರಕರಣ ಸಂಬಂಧ ಈಗಾಗಲೇ ತನಿಖೆ ಪೂರ್ಣಗೊಂಡು ಆರೋಪಪಟ್ಟಿ ಸಲ್ಲಿಕೆಯಾಗಿದೆ" ಎಂದು ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.
ಪ್ರಕರಣದ ಹಿನ್ನೆಲೆ: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದೂರು ದಾಖಲಾಗಿದೆ. ಪವಿತ್ರಾ ಗೌಡ, ದರ್ಶನ್, ಪುಟ್ಟಸ್ವಾಮಿ, ರಾಘವೇಂದ್ರ, ನಂದೀಶ್, ಜಗದೀಶ್ ಅಲಿಯಾಸ್ ಜಗ್ಗ, ಅನುಕುಮಾರ್, ರವಿ ಶಂಕರ್ ಅಲಿಯಾಸ್ ರವಿ, ಧನರಾಜ್, ವಿನಯ್ ವಿ, ನಾಗರಾಜು, ಲಕ್ಷ್ಮಣ, ದೀಪಕ್, ಪ್ರದೂಷ್, ಕಾರ್ತಿಕ್ ಅಲಿಯಾಸ್ ಕಪ್ಪೆ, ಕೇಶವಮೂರ್ತಿ, ನಿಖಿಲ್ ನಾಯಕ್ ಆರೋಪಿಗಳಾಗಿದ್ದಾರೆ. ಇವರ ವಿರುದ್ಧ ಐಪಿಸಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಕೆಲವು ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ದರ್ಶನ್ ಮತ್ತು ಪವಿತ್ರಾ ಗೌಡ ಸೇರಿ ನಾಲ್ವರಿಗೆ ಜಾಮೀನು ನೀಡಲು ನಿರಾಕರಿಸಿತ್ತು.
ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ದರ್ಶನ್‌ಗೆ ವಿಶೇಷ ಸೌಲಭ್ಯ ನೀಡಿದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಜೊತೆಗೆ ಪವಿತ್ರಾ ಗೌಡ ಮತ್ತು ಕೆಲವರನ್ನು ಪರಪ್ಪನ ಅಗ್ರಹಾರದಲ್ಲಿ ಉಳಿಸಿಕೊಂಡು, ಇನ್ನಿತರ ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರಿಸಲಾಗಿತ್ತು.
ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್ ಜಾಮೀನು ಅರ್ಜಿ ವಜಾ, ಪವಿತ್ರಾಗೂ ಜೈಲೇ ಗತಿ