ಬೆಂಗಳೂರು: ಭದ್ರಾವತಿಯಲ್ಲಿರುವ ಮೈಸೂರು ಪೇಪರ್ ಮಿಲ್ (ಎಂಪಿಎಂ) ಪುನರಾರಂಭಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಖಾಸಗೀ ಸಹಭಾಗಿತ್ವದಲ್ಲಿ ಸಂಸ್ಥೆ ಪುನಾರಂಭಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ಬಿಲ್ಕಿಸ್ ಬಾನು ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೈಸೂರು ಕಾಗದ ಕಾರ್ಖಾನೆಗೆ 20005.42 ಹೆಕ್ಟೇರ್ ಅರಣ್ಯ ಭೂಮಿಯ ಗುತ್ತಿಗೆಯನ್ನು 2020 ರಿಂದ 2060 ರವರೆಗೆ ನವೀಕರಣ ಮಾಡಲಾಗಿದೆ. ಈ ಜಾಗವು ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ಚಿತ್ರದುರ್ಗ ವ್ಯಾಪ್ತಿಯಲ್ಲಿದೆ. ಸದ್ಯ ಕಾರ್ಖಾನೆ ಸ್ಥಗಿತಗೊಂಡಿದ್ದು, ಕಾರ್ಖಾನೆಯ ಪುನರಾರಂಭಕ್ಕೆ ಕ್ರಮ ವಹಿಸಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಎಂಪಿಎಂ ಮತ್ತೆ ಕಾರ್ಯಾರಂಭ ಮಾಡುವಂತೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಪ್ರಸ್ತುತ ಎಂಪಿಎಂ ಕಾರ್ಖಾನೆ 1650.6 ಹೆಕ್ಟೇರ್ ಪ್ರದೇಶದಲ್ಲಿ ನೀಲಗಿರಿ ಬೆಳೆ ಇದೆ. ಇವು ಹಳೆಯ ನೆಡುತೋಪುಗಳಾಗಿದ್ದು, 2017 ರಿಂದ ಯಾವುದೇ ಹೊಸ ನೀಲಗಿರಿ ನೆಡುತೋಪು ಮಾಡಿಲ್ಲ. ಅರಣ್ಯ ಪ್ರದೇಶದಲ್ಲಿ ನೀಲಗಿರಿ, ಅಕೇಶಿಯಾ ಬೆಳೆಯಲು ನಿಷೇಧ ಇದೆ. ಇದರ ಪಾಲನೆಯಾಗುತ್ತಿದೆ ಎಂದರು.