ಬಳ್ಳಾರಿ:ಅಯೋಧ್ಯೆಯಿಂದ ಮರಳುತ್ತಿದ್ದ ಯಾತ್ರಿಕರಿಗೆ ರೈಲಿನಲ್ಲಿ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಬಳ್ಳಾರಿ ರೈಲ್ವೆ ಪೊಲೀಸರು ಶುಕ್ರವಾರ ಗದಗ ಬಳಿ ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಕಾರ್ಯಾಚರಣೆ ಮುಂದುವರೆದಿದೆ.
ಬಂಧಿತ ಆರೋಪಿಯನ್ನು ಹುಬ್ಬಳ್ಳಿ ರೈಲ್ವೆ ವಲಯದ ಸಿಬ್ಬಂದಿ ಎಂದು ಗುರುತಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಉನ್ನತ ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ. ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಗುರುವಾರದಂದು ಅಯೋಧ್ಯೆ ಶ್ರೀರಾಮ ದೇವಾಲಯದ ದರ್ಶನ ಪಡೆದ ನೂರಾರು ಯಾತ್ರಿಕರು ಮೈಸೂರು-ಅಯೋಧ್ಯೆ ಧಾಮ ರೈಲಿನಲ್ಲಿ ತಮ್ಮೂರಿಗೆ ಮರಳುತ್ತಿದ್ದರು. ಮಾರ್ಗ ಮಧ್ಯೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಿಲ್ದಾಣದಲ್ಲಿ ರೈಲು ನಿಂತಿದೆ. ಈ ವೇಳೆ ಬೋಗಿ ನಂ.2 ಅಯೋಧ್ಯೆ ಯಾತ್ರಿಕರಿಗೆ ಮೀಸಲು ಇರುವ ಬೋಗಿಯನ್ನು ಮೂವರು ಯುವಕರು ಹತ್ತಲು ಮುಂದಾಗಿದ್ದರು. ಯಾತ್ರಿಕರು ಯುವಕರನ್ನು ತಡೆದು ಇದು ಅಯೋಧ್ಯೆ ಯಾತ್ರಿಕರಿಗೆ ಮೀಸಲು ಇರುವ ಬೋಗಿ ಇದರಲ್ಲಿ ತಾವು ಹತ್ತುವ ಹಾಗಿಲ್ಲ ಎಂದು ತಿಳಿ ಹೇಳಿದ್ದರು.
ಆದರೆ ಆ ಯುವಕರು ಯಾತ್ರಿಕರ ಮಾತು ಕೇಳದೆ, ಅವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಅಲ್ಲಿದ್ದವರಿಗೆ ಬೆದರಿಕೆ ಹಾಕಿದ್ದರು. ತಕ್ಷಣ ಯಾತ್ರಿಕರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿ, ಅವರಿಗೆ ಯುವಕರನ್ನು ಒಪ್ಪಿಸಿದ್ದರು. ಆದರೆ ರೈಲ್ವೆ ಪೊಲೀಸರು ಯಾತ್ರಿಕರ ಮುಂದೆ ಯುವಕರನ್ನು ಬಿಟ್ಟು ಕಳಿಸಿದ್ದರು. ಇದನ್ನು ಗಮನಿಸಿದ ಯಾತ್ರಿಕರು, ರೈಲ್ವೆ ಪೊಲೀಸರ ಮೇಲೆ ಆಕ್ರೋಶಗೊಂಡು ಒಂದು ಗಂಟೆಗಳ ಕಾಲ ನಿರಂತರ ಪ್ರತಿಭಟನೆ ಮಾಡಿ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಹೀಗಾಗಿ 8.15ಕ್ಕೆ ಹೊಸಪೇಟೆಗೆ ಬಂದ ರೈಲು, 10 ಗಂಟೆಗೆ ಬಳ್ಳಾರಿ ಕಡೆ ಪ್ರಯಾಣ ಬೆಳೆಸಿತ್ತು. ಎರಡು ಗಂಟೆಗಳ ಕಾಲ ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ಅಯೋಧ್ಯೆ ಧಾಮ ರೈಲು ಮಾರ್ಗ ಮಧ್ಯೆ ನಿಂತಿತ್ತು.
ಬಳಿಕ ಸ್ಥಳಕ್ಕೆ ಬಂದ ವಿಜಯನಗರ ಎಸ್ಪಿ ಶ್ರೀಹರಿಬಾಬು, ಹೊಸಪೇಟೆಯ ಉಪವಿಭಾಗದ ಪೊಲೀಸ್ ಅಧಿಕಾರಿಗಳು ಯಾತ್ರಿಕರ ಮನವೊಲಿಸಿದ್ದರು. ಅಲ್ಲದೆ ಹಿಂದೂಪರ ಸಂಘಟನೆ, ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ಪ್ರಯತ್ನದಿಂದ ಕೊನೆಗೂ ರೈಲು ಸಂಚಾರ ಆರಂಭಿಸಿತ್ತು. ಮುಂಜಾಗ್ರತಾ ಕ್ರಮವಾಗಿ ರೈಲಿನೊಳಗೆ ರೈಲ್ವೆ ಪೊಲೀಸರು, ಸ್ಥಳೀಯ ಪೊಲೀಸರು ಬಳ್ಳಾರಿಯವರೆಗೆ ಬಂದೋಬಸ್ತ್ ನೀಡಿದ್ದರು.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬೆದರಿಕೆ ಹಾಕಿದ ಈ ಪ್ರಕರಣವನ್ನು ಸಮಗ್ರ ತನಿಖೆ ಮಾಡುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ :ಸಿಎಂ ನಿವಾಸದ ಕೂಗಳತೆ ದೂರದಲ್ಲೇ ಕಳ್ಳರ ಕೈಚಳಕ; ಅಸ್ಸೋಂ ಮೂಲದ ಆರೋಪಿ ಬಂಧನ