ಕರ್ನಾಟಕ

karnataka

ETV Bharat / state

ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಸೇರಿ ಇಬ್ಬರ ಬಂಧನ - DRUG PEDDLER

ಎಂಡಿಎಂಎ ಸಾಗಾಟ ಹಾಗೂ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಸೇರಿ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Drug peddler
ಡ್ರಗ್ ಪೆಡ್ಲರ್‌ಗಳ ಬಂಧನ (ETV Bharat)

By ETV Bharat Karnataka Team

Published : Dec 6, 2024, 10:46 PM IST

ಮಂಗಳೂರು(ದಕ್ಷಿಣ ಕನ್ನಡ): ಬೆಂಗಳೂರಿನಿಂದ ಮಂಗಳೂರು ನಗರಕ್ಕೆ ಎಂಡಿಎಂಎ ಸಾಗಾಟ, ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಸೇರಿ ಇಬ್ಬರು ಡ್ರಗ್ ಪೆಡ್ಲರ್​ಗಳನ್ನು ಬಂಧಿಸಿ, 200 ಗ್ರಾಂ ಎಂಡಿಎಂಎಯನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನೈಜೀರಿಯಾದ ಪ್ರಜೆ ಚಿಕ ಜೋಸೇಫ್ ಇಝಿ (26) ಮತ್ತು ಮೈಸೂರಿನ ದರ್ಶನ್ ಕೆ.ಜಿ (25 ) ಬಂಧಿತರು.

ಇತ್ತೀಚೆಗೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಕ್ಬಾಲ್ ಎಂಬಾತನನ್ನು ಬಜ್ಪೆ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಆರೋಪಿಗಳಿಗೆ ಮಾದಕ ವಸ್ತು ಎಂಡಿಎಂಎ ಪೂರೈಕೆ ಮಾಡುತ್ತಿದ್ದ ಡ್ರಗ್ ಪೆಡ್ಲರ್​ಗಳ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ₹10 ಲಕ್ಷ ಮೌಲ್ಯದ 200 ಗ್ರಾಂ ಎಂಡಿಎಂಎ, ಮಾರುತಿ ಬೊಲೆನೋ ಕಾರು, 5 ಮೊಬೈಲ್ ಫೋನ್​ಗಳು, ವಿವಿಧ ಬ್ಯಾಂಕ್​ಗಳ 5 ಡೆಬಿಟ್ ಕಾರ್ಡ್​ಗಳು, 7 ಸಿಮ್ ಕಾರ್ಡ್​ಗಳು, ಡಿಜಿಟಲ್ ತೂಕ ಮಾಪಕವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ 18,25,500 ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ :ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: 6 ಕೋಟಿ ಮೌಲ್ಯದ ಡ್ರಗ್ಸ್ ವಶ, ನೈಜೀರಿಯಾ ಪ್ರಜೆ ಬಂಧನ

ಆರೋಪಿ ನೈಜಿರಿಯಾ ಪ್ರಜೆ. ಬೆಂಗಳೂರಿನಲ್ಲಿದ್ದುಕೊಂಡು ಇನ್ನೋರ್ವ ಆರೋಪಿ ದರ್ಶನ್ ಎಂಬಾತನ ಜೊತೆ ಸೇರಿ ಮಂಗಳೂರಿನ ವಿವಿಧ ವ್ಯಕ್ತಿಗಳಿಗೆ ಎಂಡಿಎಂಎ ಸಾಗಾಟ ಹಾಗೂ ಮಾರಾಟ ಮಾಡುತ್ತಿದ್ದರು. ಆರೋಪಿ ಚಿಕ ಜೋಸೆಫ್ ಇಝಿ ಎಂಬಾತನು 2023 ನೇ ಮೇ ತಿಂಗಳಲ್ಲಿ ಭಾರತಕ್ಕೆ ಉದ್ಯೋಗ ವೀಸಾದಲ್ಲಿ ಬಂದಿದ್ದನು. ಬೆಂಗಳೂರಿನ ಯಲಹಂಕದಲ್ಲಿ ನೈಜೀರಿಯ ಪ್ರಜೆಯು ಹೇರ್ ಕಟ್ಟಿಂಗ್ ಉದ್ಯೋಗ ಮಾಡುತ್ತಿದ್ದು, ಈ ಸಮಯದಲ್ಲಿ ಈತನ ವಿರುದ್ಧ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕುರಿತು ಬೆಂಗಳೂರು ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸುಮಾರು 4 ತಿಂಗಳ ಹಿಂದೆ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನು. ಈ ಮಾದಕ ವಸ್ತು ಮಾರಾಟ, ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ABOUT THE AUTHOR

...view details