ಕರ್ನಾಟಕ

karnataka

ETV Bharat / state

ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ನಕಲಿ ಅಂಕಪಟ್ಟಿ ಸೃಷ್ಟಿ: 3 ಸರ್ಕಾರಿ ನೌಕರರು, ಅಭ್ಯರ್ಥಿಗಳು ಸೇರಿ 48 ಮಂದಿ ಅರೆಸ್ಟ್ - fake marks card

ಸರ್ಕಾರಿ ಕೆಲಸ ಪಡೆಯಲು ನಕಲಿ ಅಂಕಪಟ್ಟಿ ತಯಾರಿಸಿದ್ದ 37 ಅಭ್ಯರ್ಥಿಗಳನ್ನ ಒಳಗೊಂಡಂತೆ 48 ಮಂದಿ ಆರೋಪಿಗಳನ್ನ ಸಿಸಿಬಿ ವಿಶೇಷ ವಿಚಾರಣಾ ದಳ ಅಧಿಕಾರಿಗಳು ಬಂಧಿಸಿ ಜೈಲಿಗಟ್ಟಿದ್ದಾರೆ.

fake-marks
ನಕಲಿ ಅಂಕಪಟ್ಟಿ ಸೃಷ್ಟಿಸಿದ ಆರೋಪಿಗಳು (ETV Bharat)

By ETV Bharat Karnataka Team

Published : Aug 30, 2024, 3:25 PM IST

Updated : Aug 30, 2024, 4:52 PM IST

ಬೆಂಗಳೂರು:ನಕಲಿ ದಾಖಲಾತಿ ಸಲ್ಲಿಸಿ ಜಲಸಂಪನ್ಮೂಲ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಹುದ್ದೆ ಗಿಟ್ಟಿಸಿಕೊಳ್ಳಲು ಮುಂದಾಗಿದ್ದ 37 ಮಂದಿ ಅಭ್ಯರ್ಥಿಗಳು ಒಳಗೊಂಡಂತೆ 48 ಮಂದಿ ಆರೋಪಿಗಳನ್ನ ಸಿಸಿಬಿ ವಿಶೇಷ ವಿಚಾರಣಾ ದಳ ಅಧಿಕಾರಿಗಳು ಬಂಧಿಸಿದ್ದಾರೆ.

37 ಮಂದಿ ಅಭ್ಯರ್ಥಿಗಳ ಜೊತೆಗೆ 11 ಮಂದಿ ಮಧ್ಯವರ್ತಿಗಳನ್ನ ಬಂಧಿಸಲಾಗಿದೆ. ಈ ಪೈಕಿ ಮೂವರು ಸರ್ಕಾರಿ ನೌಕರರಾಗಿದ್ದಾರೆ. ಆನಂದ್, ಕೃಷ್ಣ ಹಾಗೂ ಪ್ರದೀಪ್ ಬಂಧಿತ ಸರ್ಕಾರಿ ನೌಕರರು. ಆನಂದ್ ಕಲಬುರ್ಗಿ ಜಿಲ್ಲೆ ಮೊರಾರ್ಜಿ ದೇಸಾಯಿ ಶಾಲೆಯ ಪ್ರಾಂಶುಪಾಲರಾದರೆ, ಕೃಷ್ಣ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ಜೋಗ್ ಫಾಲ್ಸ್ ಕಚೇರಿಯಲ್ಲಿ ಎಫ್​ಡಿಎ ಹಾಗೂ ಪ್ರದೀಪ್ ಹಾಸನದಲ್ಲಿ ಜಲಸಂಪನ್ಮೂಲ ಇಲಾಖೆಯ ಎಫ್​ಡಿಐ ಆಗಿ ಕೆಲಸ ಮಾಡುತ್ತಿದ್ದರು. ಬಂಧಿತ ಆರೋಪಿಗಳಿಂದ ಒಟ್ಟು 17 ಮೊಬೈಲ್ ಫೋನ್, 40 ಲಕ್ಷ ಮೌಲ್ಯದ ಎರಡು ಕಾರು ಹಾಗೂ ಒಂದು ಕಂಪ್ಯೂಟರ್ ಹಾರ್ಡ್ ಡಿಸ್ಕ್ ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ಧಾರೆ.

ಜಲಸಂಪನ್ಮೂಲ ಇಲಾಖೆಯು 2022ರ ಅಕ್ಟೋಬರ್​ನಲ್ಲಿ ದ್ವಿತೀಯ ದರ್ಜೆ ಸಹಾಯಕ ಬ್ಯಾಕ್ ಲಾಗ್ 182 ಹುದ್ದೆಗಳಿಗೆ ನೇರ ನೇಮಕಾತಿಯಡಿ ಆನ್​ಲೈನ್ ಮೂಲಕ ಅರ್ಜಿ ಆಹ್ವಾನಿಸಿತ್ತು. ನೇಮಕಾತಿಗಾಗಿ 62 ಮಂದಿ ಅಭ್ಯರ್ಥಿಗಳು ಸಲ್ಲಿಸಿದ್ದ ಅಂಕಪಟ್ಟಿ ಹಾಗೂ ಇತರೆ ದಾಖಲಾತಿಗಳು ಪರಿಶೀಲನೆ ವೇಳೆ ನಕಲಿ ಎಂದು ಕಂಡುಬಂದ ಹಿನ್ನೆಲೆ ಅವರ ವಿರುದ್ಧ ಕಾನೂನು ಕ್ರಮಕ್ಕಾಗಿ ಶೇಷಾದ್ರಿಪುರ ಠಾಣೆಗೆ ಇಲಾಖೆಯ ಅಧಿಕಾರಿಗಳು ದೂರು ನೀಡಿದ್ದರು.

ಪ್ರಕರಣ ಸಿಸಿಬಿ ಹಸ್ತಾಂತರವಾಗಿದ್ದರಿಂದ ತನಿಖೆ ಕೈಗೊಂಡ ಸಿಸಿಬಿ ಇನ್​ಸ್ಪೆಕ್ಟರ್ ಶ್ರೀನಿವಾಸ್ ನೇತೃತ್ವದ ತಂಡವು ಕಲಬುರಗಿಯಲ್ಲಿ 25, ಹಾಸನ 12, ಬೆಳಗಾವಿ 3, ಕೋಲಾರ, ಕೊಪ್ಪಳ, ವಿಜಯನಗರ, ರಾಯಚೂರು ಸೇರಿದಂತೆ ಒಟ್ಟು 12 ಜಿಲ್ಲೆಗಳಿಂದ ಅನಧಿಕೃತವಾಗಿ ಅರ್ಜಿ ಸಲ್ಲಿಸಿದ್ದ 62 ಜನರ ಪೈಕಿ 37 ಮಂದಿ ಅಭ್ಯರ್ಥಿಗಳನ್ನ ಬಂಧಿಸಿದೆ. ಅಲ್ಲದೆ, ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ 11 ಮಂದಿಯನ್ನ ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

25 ಮಂದಿ ಅಭ್ಯರ್ಥಿಗಳು ನಾಪತ್ತೆ :ಬಂಧಿತ ಅಭ್ಯರ್ಥಿಗಳೆಲ್ಲರೂ ಮಧ್ಯಮ ವರ್ಗದವರಾಗಿದ್ದು, ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ಫೇಲಾದವರು. ಇನ್ನೂ ಕೆಲ ಅಭ್ಯರ್ಥಿಗಳು ಕಡಿಮೆ ಪರ್ಸೆಂಟೇಜ್ ಪಡೆದುಕೊಂಡಿದ್ದರು. ವಾಮಮಾರ್ಗದ ಮೂಲಕ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ನಕಲಿ ಅಂಕಪಟ್ಟಿ ಸೃಷ್ಟಿಸುವ ಜಾಲದೊಂದಿಗೆ ಸಂಪರ್ಕ ಬೆಳೆಸಿ, ಲಕ್ಷಾಂತರ ಹಣ ನೀಡಿ ಹೆಚ್ಚು ಅಂಕ ಹೊಂದಿರುವ ರೀತಿ ಅಂಕಪಟ್ಟಿ ಪಡೆಯುತ್ತಿದ್ದರು. ಸಕ್ರಿಯವಾಗಿದ್ದ ಮಧ್ಯವರ್ತಿಗಳು ಪ್ರತ್ಯೇಕವಾಗಿ ಅಭ್ಯರ್ಥಿಗಳನ್ನ ವಂಚಿಸಿದ್ದರು. ಸದ್ಯ 25 ಮಂದಿ ಅಭ್ಯರ್ಥಿಗಳು ನಾಪತ್ತೆಯಾಗಿದ್ದು, ಬಂಧನಕ್ಕಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ :ನಕಲಿ ಅಂಕಪಟ್ಟಿ ನೀಡಿ ಅಂಚೆ ಇಲಾಖೆಯಲ್ಲಿ ನೌಕರಿ ಗಿಟ್ಟಿಸಿಕೊಂಡಿದ್ದ 14 ಜನರ ವಿರುದ್ಧ ಪ್ರಕರಣ

Last Updated : Aug 30, 2024, 4:52 PM IST

ABOUT THE AUTHOR

...view details