ಹುಬ್ಬಳ್ಳಿ:ಉತ್ತರಾಖಂಡ ಸಹಸ್ತ್ರತಾಲ್ ಶಿಖರದ ಚಾರಣದಲ್ಲಿ ಹಿಮಪಾತದಿಂದ ಸಾವನ್ನಪ್ಪಿದ 9 ಕನ್ನಡಿಗರಲ್ಲಿ ಹುಬ್ಬಳ್ಳಿ ಮೂಲದ ಮುಂಗುರವಾಡಿ ದಂಪತಿ ಕೂಡ ಒಳಗೊಂಡಿದ್ದಾರೆ.
ಕರ್ನಾಟಕದಿಂದ ತೆರಳಿದ್ದ 22 ಚಾರಣಿಗರ ತಂಡ ಉತ್ತರಾಖಂಡದ ಎತ್ತರದ ಸಹಸ್ತ್ರತಾಲ್ ಮಯಳಿ ಪ್ರದೇಶಕ್ಕೆ ತೆರಳಿ, ಅಲ್ಲಿಂದ ಚಾರಣ ಆರಂಭಿಸಿತ್ತು. ಚಾರಣದ ಗಮ್ಯಸ್ಥಾನವನ್ನು ತಲುಪಿದ ತಂಡ ಮತ್ತೆ ಶಿಬಿರಕ್ಕೆ ಹಿಂತಿರುಗಲು ಮುಂದಾಗಿದೆ. ಆಗ ಮಾರ್ಗಮಧ್ಯೆ ಹಿಮಗಾಳಿಯಿಂದಾಗಿ ಹವಾಮಾನ ಸಂಪೂರ್ಣ ಹದಗೆಟ್ಟು, ಎಲ್ಲಾ ಚಾರಣಿಗರು ಅಪಾಯಕ್ಕೆ ಸಿಲುಕಿದ್ದರು. ಇದರಲ್ಲಿ 9 ಚಾರಣಿಗರು ಮೃತಪಟ್ಟಿದ್ದು, 13 ಜನರನ್ನು ರಕ್ಷಣೆ ಮಾಡಲಾಗಿದೆ.
ಚಾರಣಕ್ಕೆ ಹೋದ 22 ಮಂದಿಯ ಪೈಕಿ ಹುಬ್ಬಳ್ಳಿ ಮೂಲದ ವಿನಾಯಕ ಮುಂಗುರವಾಡಿ ಹಾಗೂ ಸುಜಾತಾ ಮುಂಗುರವಾಡಿ ದಂಪತಿ ಕೊನೆಯುಸಿರೆಳೆದಿದ್ದಾರೆ. ಈ ದಂಪತಿ ಜನನದ ಇಸ್ವಿ ಬೇರೆ ಬೇರೆಯಾದರು ದಿನಾಂಕ ತಿಂಗಳು ಒಂದೇ(ಅಕ್ಟೋಬರ್ 3). ವಿಪರ್ಯಾಸವೆಂದರೆ ಜೂನ್ 4ರಂದು ಒಟ್ಟಿಗೆ ಮೃತಪಟ್ಟು ಸಾವಲ್ಲಿಯೂ ಒಂದಾಗಿದ್ದಾರೆ.
ಮೃತರಿಬ್ಬರೂ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ 1994 ರಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ವಿನಾಯಕ ಮೆಕ್ಯಾನಿಕಲ್ ವಿಭಾಗದಿಂದ ಚಿನ್ನದ ಪದಕ ಪಡೆದಿದ್ದರು. ಆರಂಭಿಕ ದಿನಗಳಲ್ಲಿ ಹುಬ್ಬಳ್ಳಿಯ ಉಣಕಲ್‌ನಲ್ಲಿ ವಾಸವಿದ್ದ ಇಬ್ಬರೂ ಉದ್ಯೋಗ ಅರಸಿಕೊಂಡು 1996ರಲ್ಲಿ ಬೆಂಗಳೂರಿಗೆ ತೆರಳಿದ್ದರು. ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಲೇ 'ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ್' ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಕಳೆದ 16 ವರ್ಷಗಳಿಂದ ಜನರ ಸೇವೆಯಲ್ಲಿ ತೊಡಗಿದ್ದರು.