ಶಿವಮೊಗ್ಗ: ಜಿಲ್ಲೆಯಲ್ಲಿ ಸೋಮವಾರ ನಡೆಸಿದ ಜಿಲ್ಲಾ ಮಟ್ಟದ ಕೌಶಲ್ಯ ಮತ್ತು ರೋಜಗಾರ್ ಉದ್ಯೋಗ ಮೇಳದಲ್ಲಿ 324 ನಿರುದ್ಯೋಗಿ ಯುವಕರ - ಯುವಕರಿಗೆ ವಿವಿಧ ಕಂಪನಿಗಳು ಉದ್ಯೋಗ ಪತ್ರವನ್ನು ನೀಡಿವೆ. ಜೊತೆಗೆ 683 ಜನರನ್ನು ಶಾರ್ಟ್ ಲಿಸ್ಟ್ ಮಾಡಿವೆ. ಇದರಿಂದಾಗಿ ಅಂದಾಜು 1 ಸಾವಿರ ಮಂದಿ ಉದ್ಯೋಗ ದೊರಕಿದಂತಾಗಿದೆ.
ಶಿವಮೊಗ್ಗದ ಆಚಾರ್ಯ ತುಳಸಿ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೌಶಲ್ಯ ಅಭಿವೃದ್ಧಿ ನಿಗಮ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಕೌಶಲ್ಯ ಮತ್ತು ರೋಜಗಾರ್ ಉದ್ಯೋಗಮೇಳವನ್ನು ಆಯೋಜಿಸಲಾಗಿತ್ತು.
ಈ ಉದ್ಯೋಗ ಮೇಳಕ್ಕೆ ಆನ್ ಲೈನ್ನಲ್ಲಿ 45 ಕಂಪನಿಗಳು ನೋಂದಣಿ ಮಾಡಿದ್ದವು. ಆದರೆ, ಇಂದು 39 ಕಂಪನಿಗಳು ಮೇಳಕ್ಕೆ ಬಂದಿದ್ದವು. ಟಯೋಟ, ಶಾಹಿ ಸೇರಿದಂತೆ ಪ್ರಮುಖ ಕಂಪನಿಗಳು ಭಾಗವಹಿಸಿದ್ದವು. ಇನ್ನು ಉದ್ಯೋಗ ಅರಸಿ ಆನ್ ಲೈನ್ನಲ್ಲಿ ನೋಂದಣಿ ಮಾಡಿಕೊಂಡಿದ್ದ 3,800 ಜನರ ಪೈಕಿ 2,778 ಜನರು ಆಗಮಿಸಿದ್ದರು.
ಮುಂದಿನ ಬಾರಿ ಉಚಿತ ಬಸ್ ಪಾಸ್ ವಿತರಣೆ:ಉದ್ಯೋಗ ಮೇಳ ಉದ್ಘಾಟಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಇಂತಹ ಮೇಳದಿಂದ ನಿರುದ್ಯೋಗಿ ಯುವಕ - ಯುವತಿಯರಿಗೆ ಹಾಗೂ ಕಂಪನಿಗಳಿಗೆ ತುಂಬಾ ಅನುಕೂಲವಾಗಲಿದೆ ಎಂದರು.
ಕೌಶಲ್ಯ ಮತ್ತು ರೋಜಗಾರ್ ಉದ್ಯೋಗ ಮೇಳ ಯಶಸ್ವಿಯಾಗಿದೆ. ಯಾರಿಗೆ ಉದ್ಯೋಗದ ಅವಶ್ಯಕತೆ ಇದೆ ಅಂತಹ ವಿದ್ಯಾರ್ಥಿಗಳು, ಅಭ್ಯರ್ಥಿಗಳು ಬಂದಿದ್ದಾರೆ. ಗ್ರಾಮೀಣ ಭಾಗದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಅಂತಹವರಿಗೆ ಬಸ್ ಪಾಸ್ ಕೊಡುವ ವ್ಯವಸ್ಥೆ ಮುಂದಿನ ದಿನಗಳಲ್ಲಿ ಮಾಡಲಾಗುವುದು. ಸುಮಾರು 40 ಕ್ಕೂ ಹೆಚ್ಚು ಕಂಪನಿಗಳು ಈ ಮೇಳಕ್ಕೆ ಬಂದಿವೆ. ಉದ್ಯೋಗ ಮೇಳ ನಾಮಕೇವಾಸ್ತೆ ಆಗಬಾರದು ಎಂಬ ನಿಟ್ಟಿನಲ್ಲಿ ಮೇಳ ಆಯೋಜಿಸಲಾಗಿದೆ. ಆನ್ ಲೈನ್ನಲ್ಲಿ ರಿಜಿಸ್ಟರ್ ಆದವರಿಗೆ ಬಸ್ ಪಾಸ್ ಕೊಡವ ಬಗ್ಗೆ ತೀರ್ಮಾ ಮಾಡಲಾಗುವುದು ಎಂದು ಭರವಸೆ ನೀಡಿದರು.