ಬೆಂಗಳೂರು: ನ್ಯಾಯಾಲಯಗಳಲ್ಲಿ ಕಕ್ಷಿದಾರರು ಮತ್ತು ವಕೀಲರು ಕೆಲ ಸಂದರ್ಭಗಳಲ್ಲಿ ಮಿತಿ ಮೀರಿ ವರ್ತನೆ ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ನ್ಯಾಯಾಂಗ ನಿಂದನೆ ಅಸ್ತ್ರವನ್ನು ಬಳಕೆ ಮಾಡದೆ, ಅವರ ವರ್ತನೆಗೆ ಕಾರಣ ತಿಳಿದು ಪರಿಹಾರ ಕಂಡುಕೊಳ್ಳಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ತಿಳಿಸಿದರು.
ಶನಿವಾರ ನಗರದ ಜಿಕೆವಿಕೆಯ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ 21ನೇ ದ್ವೈವಾರ್ಷಿಕ ರಾಜ್ಯ ಮಟ್ಟದ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಮಸ್ಯೆಗಳಿಗೆ ಸಿಲುಕಿದವರು ಅದರ ಪರಿಹಾರಕ್ಕಾಗಿ ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದು, ಕೆಲ ಸಂದರ್ಭಗಳಲ್ಲಿ ನ್ಯಾಯಾಲಯದಲ್ಲಿ ಮಿತಿ ಮೀರಿ ವರ್ತಿಸುತ್ತಾರೆ. ಈ ಬೆಳವಣಿಗೆ ಬಳಿಕ ನ್ಯಾಯಾಂಗ ನಿಂದನೆ ಅಧಿಕಾರವನ್ನು ಬಳಸದೆ ಅವರು ಏಕೆ ಈ ರೀತಿಯಲ್ಲಿ ವರ್ತಿಸಿದರು ಎಂಬುದನ್ನು ಕಂಡುಕೊಳ್ಳಬೇಕಾಗಿದೆ. ಕೆಲ ಸಂದರ್ಭಗಳಲ್ಲಿ ನಮ್ಮ (ನ್ಯಾಯಾಧೀಶರ)ಕುಟುಂಬದಲ್ಲಿಯೂ ಈ ರೀತಿಯ ಬೆಳವಣಿಗೆಗಳು ಸಾಮಾನ್ಯವಾಗಿದ್ದು, ಅದನ್ನು ಸಹಿಸಿಕೊಂಡು ಹೋಗಬೇಕಾಗುತ್ತದೆ ಎಂದು ಸಲಹೆ ನೀಡಿದರು.
ದೇಶದ ನ್ಯಾಯಾಂಗ ವ್ಯವಸ್ಥೆಯು ಸಮಾಜ ತಿದ್ದುವ ಕಾರ್ಯ ಮಾಡುತ್ತಿದೆ. ಪ್ರತಿಯೊಂದು ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಆದೇಶಗಳ ಮೂಲಕ ನೀಡುವ ಸಂದೇಶಗಳನ್ನು ಸಮಾಜದ ಬದಲಾವಣೆಗೆ ಕಾರಣವಾಗುತ್ತಿದೆ ಎಂದರು.
ಜಿಲ್ಲಾ ನ್ಯಾಯಾಂಗವು ನಮ್ಮ ಕಾನೂನು ವ್ಯವಸ್ಥೆಯ ಬೆನ್ನೆಲುಬಾಗಿದೆ. ಹಾಗೂ ನ್ಯಾಯಾಂಗದ ಮೂಲಾಧಾರ ಎಂಬುದಾಗಿ ಬಲವಾಗಿ ನಂಬುತ್ತೇನೆ. ಜಿಲ್ಲಾ ನ್ಯಾಯಾಂಗ ನಮ್ಮ ನಾಗರೀಕರಿಗೆ ಸಂಪರ್ಕದ ಮೊದಲ ಬಿಂದುವಾಗಿದೆ. ನ್ಯಾಯಾಂಗ ಅಧಿಕಾರಿಗಳು ನ್ಯಾಯದ ವಿತರಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ ಎಂದು ಸಿಜೆಐ ಹೇಳಿದರು.
ಶೀಘ್ರ ಇತ್ಯರ್ಥ:ರಾಜ್ಯದಲ್ಲಿ 2023ರ ಜನವರಿಯಿಂದ 2024ರ ಫೆಬ್ರವರಿ ಅಂತ್ಯದವರೆಗೂ 21.25 ಲಕ್ಷ ಅರ್ಜಿಗಳು ದಾಖಲಾಗಿದ್ದು, 20.62 ಲಕ್ಷ ಇತ್ಯರ್ಥವಾಗಿವೆ. ಕೆಲ ಪ್ರಕರಣಗಳು ಮಾತ್ರ ಬಾಕಿ ಉಳಿದಿವೆ. ಇದೇ ರೀತಿಯಲ್ಲಿ ದೇಶದಲ್ಲೆಲ್ಲಾ ಆಗಬೇಕಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ನ್ಯಾಯಾಲಯಗಳಲ್ಲಿ ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಳ್ಳುವುದು ಸೇರಿದಂತೆ ನ್ಯಾಯಾಂಗ ಕ್ಷೇತ್ರಕ್ಕೆ ಅಗತ್ಯ ಆರ್ಥಿಕ ನೆರವು ನೀಡುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಶ್ಲಾಘನೆ ವ್ಯಕ್ತಪಡಿಸಿದರು.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಆರ್ಥಿಕ ದುರ್ಬಲರಿಗೆ ನ್ಯಾಯ ನಿರಾಕರಣೆಯಾಗದಂತೆ ನೋಡಿಕೊಳ್ಳುವುದಕ್ಕಾಗಿ ಕಾನೂನು ಸೇವಾ ಪ್ರಾಧಿಕಾರದಿಂದ ಕಾನೂನು ನೆರವನ್ನು ಮತ್ತಷ್ಟು ಬಲಪಡಿಸಬೇಕಾಗಿದೆ. ನ್ಯಾಯಾಲಯಗಳಲ್ಲಿ ಭಾಷೆಯ ಸಮಸ್ಯೆಯಾಗದಂತೆ ಕಲಾಪಗಳಲ್ಲಿ ಸ್ಥಳೀಯ ಭಾಷೆಯ ಬಳಕೆಗೆ ಅಗತ್ಯವಾದ ಅನುವಾದಗಳಿಗಾಗಿ ಕೃತಕ ಬುದ್ಧಿಮತ್ತೆ ಬಳಕೆ ಮಾಡಿದಲ್ಲಿ ನ್ಯಾಯಾಲಯದ ಮೆಟ್ಟಿಲೇರುವವರ ಸಂಖ್ಯೆ ಹೆಚ್ಚಾಗಲಿದೆ. ಅಲ್ಲದೆ, ನ್ಯಾಯಾಂಗದ ಕುರಿತಂತಹ ನಂಬಿಕೆ ಮತ್ತು ವಿಶ್ವಾಸವನ್ನು ಹೆಚ್ಚಳ ಮಾಡಲು ನೆರವಾಗಲಿದೆ. ದೇಶದ ಜನತೆಯ ಸಂವಿಧಾನ ಬದ್ಧ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಅಂತಿಮ ರಕ್ಷಕನಾಗಿ ನ್ಯಾಯಾಂಗ ಕಾರ್ಯ ನಿರ್ವಹಿಸುತ್ತಿದೆ. ಭಾರತದ ಸಂವಿಧಾನವು ನ್ಯಾಯಾಂಗದ ಜೊತೆಗೆ, ನ್ಯಾಯ, ಸಮಾನತೆ ಮತ್ತು ಸಮಾನತೆಯ ಮೂಲ ತತ್ವಗಳನ್ನು ಸಾಕಾರಗೊಳಿಸುತ್ತಿದೆ ಎಂದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಮ್ಮ ಹಕ್ಕುಗಳನ್ನು ಎತ್ತಿಹಿಡಿಯುವ ಮತ್ತು ನ್ಯಾಯ ಮತ್ತು ಸಮಾನತೆಯ ತತ್ವಗಳನ್ನು ಸಾಕಾರಗೊಳಿಸುವಂತೆ ಮಾಡಿದೆ. ನ್ಯಾಯಾಂಗದ ಕರ್ತವ್ಯವು ಕಾನೂನು ವ್ಯಾಖ್ಯಾನವನ್ನು ಮೀರಿ ನೈತಿಕ ಉಸ್ತುವಾರಿಯಾಗಿ ಸೇವೆ ಸಲ್ಲಿಸುತ್ತಿದೆ. ಸದ್ಗುಣ ಮತ್ತು ಸಮಗ್ರತೆಯ ಸಮಾಜದ ನಿರ್ಮಾಣದ ಕಡೆಗೆ ಕೊಂಡೊಯ್ಯುತ್ತಿದೆ. ನ್ಯಾಯಾಂಗ ಸೇವೆಯ ಮೂಲಕ ನೈತಿಕ ಪ್ರಜ್ಞೆ ಮರು ಹುಟ್ಟುಹಾಕುತ್ತಿದೆ. ಕೋಮು ಸೌಹಾರ್ದತೆಯತ್ತ ಕೊಂಡೊಯ್ಯುತ್ತದೆ ಎಂದು ಹೇಳಿದರು.