ಕರ್ನಾಟಕ

karnataka

ETV Bharat / state

ಅಪ್ರಾಪ್ತೆ ಮೇಲೆ ಅತ್ಯಾಚಾರ: ಯುವಕನಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

ಅಪ್ರಾಪ್ತೆ ಮೇಲೆ ಅತ್ಯಾಚಾರ ಮತ್ತು ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಯುವಕರಿಗೆ ಚಾಮರಾಜನಗರದ ಅಧಿಕ ಜಿಲ್ಲಾ ಮತ್ತು ಸತ್ರ ಎಫ್​ಟಿಎಸ್​ಸಿ ವಿಶೇಷ ಪೋಕ್ಸೋ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ.

ಅಪ್ರಾಪ್ತೆ ಮೇಲೆ ಅತ್ಯಾಚಾರ
ಅಪ್ರಾಪ್ತೆ ಮೇಲೆ ಅತ್ಯಾಚಾರ

By ETV Bharat Karnataka Team

Published : Feb 23, 2024, 5:00 PM IST

ಚಾಮರಾಜನಗರ:ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಯುವಕನ ಅಪರಾಧ ಸಾಬೀತಾದ ಹಿನ್ನೆಲೆ ಚಾಮರಾಜನಗರದ ಅಧಿಕ ಜಿಲ್ಲಾ ಮತ್ತು ಸತ್ರ ಎಫ್​ಟಿಎಸ್​ಸಿ ವಿಶೇಷ ಪೋಕ್ಸೋ ನ್ಯಾಯಾಲಯವು 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಶುಕ್ರವಾರ ಆದೇಶಿಸಿದೆ.

ಕೊಳ್ಳೇಗಾಲ ತಾಲೂಕಿನ‌ ಕೆ.ಎಸ್.ದೊಡ್ಡಿ ಗ್ರಾಮದ ರಾಜಪ್ಪ‌(26) ಎಂಬಾತ ಶಿಕ್ಷೆಗೊಳಗಾದ ಅಪರಾಧಿ. 16 ವರ್ಷ ವಯಸ್ಸಿನ ಅಪ್ರಾಪ್ತೆಯನ್ನು ಈತ ಪುಸಲಾಯಸಿ ತಮಿಳುನಾಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಸಾಕ್ಷ್ಯಾಧಾರಗಳಿಂದ ಯುವಕನ ಕೃತ್ಯ ಸಾಬೀತಾದ ಹಿನ್ನೆಲೆ ಅಧಿಕ ಜಿಲ್ಲಾ ಮತ್ತು ಸತ್ರ ಎಫ್​ಟಿಎಸ್​ಸಿ ವಿಶೇಷ ಪೋಕ್ಸೋ ನ್ಯಾಯಾಧೀಶರಾದ ಎನ್.ಆರ್ ಲೋಕಪ್ಪ ಯುವಕನಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಜೊತೆಗೆ, ನೊಂದ ಬಾಲಕಿಗೆ 4 ಲಕ್ಷ ರೂ. ಪರಿಹಾರ ಕೊಡಬೇಕೆಂದು ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೇಶ್ ವಾದ ಮಂಡಿಸಿದ್ದರು.

ಲೈಂಗಿಕ ದೌರ್ಜನ್ಯ ಎಸಗಿದವನಿಗೆ 3 ವರ್ಷ ಜೈಲು:ಅಪ್ರಾಪ್ರೆಗೆ ಲೈಂಗಿಕ ದೌರ್ಜನ್ಯ ನೀಡಿದ ಯುವಕನ ಅಪರಾಧ ಸಾಬೀತಾದ ಹಿನ್ನೆಲೆ ಚಾಮರಾಜನಗರದ ಅಧಿಕ ಜಿಲ್ಲಾ ಮತ್ತು ಸತ್ರ ಎಫ್​ಟಿಎಸ್​ಸಿ ವಿಶೇಷ ಪೋಕ್ಸೋ ನ್ಯಾಯಾಲಯವು 3 ವರ್ಷ ಶಿಕ್ಷೆ ನೀಡಿ ಆದೇಶಿಸಿದೆ. ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದ ಪ್ರದೀಪ್ ಶಿಕ್ಷೆಗೊಳಗಾದ ಅಪರಾಧಿ. 16 ವರ್ಷ ವಯಸ್ಸಿನ ಅಪ್ರಾಪ್ತೆಯನ್ನು ಈತ ಪುಸಲಾಯಿಸಿ ಕರೆದೊಯ್ದು ಲೈಂಗಿಕ ದೌರ್ಜನ್ಯ ನೀಡಿದ್ದನು. ಈ ಸಂಬಂಧ ಕುದೇರು ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.

ಸಾಕ್ಷ್ಯಾಧಾರಗಳಿಂದ ಯುವಕನ ಕೃತ್ಯ ಸಾಬೀತಾದ ಹಿನ್ನೆಲೆ ನ್ಯಾಯಾಧೀಶರಾದ ಎನ್.ಆರ್ ಲೋಕಪ್ಪ ಯುವಕನಿಗೆ 3 ವರ್ಷ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಜೊತೆಗೆ, ನೊಂದ ಬಾಲಕಿಗೆ 1 ಲಕ್ಷ ರೂ. ಪರಿಹಾರ ಕೊಡಬೇಕೆಂದು ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಿದ್ದಾರೆ.

ಇದನ್ನೂ ಓದಿ :ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ ಹೈಕೋರ್ಟ್

ABOUT THE AUTHOR

...view details