ಉಳ್ಳಾಲ(ಮಂಗಳೂರು): ಉಳ್ಳಾಲದ ಖಾಸಗಿ ರೆಸಾರ್ಟ್‌ನ ಈಜುಕೊಳದಲ್ಲಿ ಮೈಸೂರಿನ ಮೂವರು ಯುವತಿಯರು ಮುಳುಗಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ನಡೆಯಿತು.
ಮೈಸೂರು ಕುರುಬರಹಳ್ಳಿ ನಿವಾಸಿ ನಿಶಿತಾ ಎಂ.ಡಿ (21), ಮೈಸೂರು ರಾಮಾನುಜ ರಸ್ತೆ ಕೆ.ಆರ್.ಮೊಹಲ್ಲಾ ನಿವಾಸಿ ಪಾರ್ವತಿ ಎಸ್. (20), ಮೈಸೂರು ವಿಜಯನಗರ ದೇವರಾಜ ಮೊಹಲ್ಲಾ ನಿವಾಸಿ ಕೀರ್ತನಾ ಎನ್. (21) ಸಾವನ್ನಪ್ಪಿರುವ ಯುವತಿಯರು ಎಂದು ಗುರುತಿಸಲಾಗಿದೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ಗ್ರಾಮದ ಬಟ್ಟಪ್ಪಾಡಿ ಅಡ್ಡರಸ್ತೆ ಪೆರಿಬೈಲ್ ಎಂಬಲ್ಲಿರುವ ವಾಸ್ಗೊ ರೆಸಾರ್ಟ್‌ನಲ್ಲಿ ಘಟನೆ ನಡೆದಿದೆ.
ಒಬ್ಬಳ ರಕ್ಷಣೆಗೆ ತೆರಳಿ ಮತ್ತಿಬ್ಬರು ಸಾವು: ಯುವತಿಯರು ಬೀಚ್ ಪ್ರವಾಸಕ್ಕೆಂದು ಮೈಸೂರಿನಿಂದ ಉಳ್ಳಾಲಕ್ಕೆ ಶನಿವಾರ ಆಗಮಿಸಿದ್ದು, ರೆಸಾರ್ಟ್‌ನಲ್ಲಿ ತಂಗಿದ್ದರು. ಇಂದು ಬೆಳಿಗ್ಗೆ ಮೂವರೂ ಈಜುಕೊಳಕ್ಕೆ ಇಳಿದಿದ್ದಾರೆ. ಇದರ ವಿಡಿಯೋ ಸೆರೆ ಹಿಡಿಯಲು ತಮ್ಮ ಮೊಬೈಲ್ ಅನ್ನು ರೆಕಾರ್ಡ್ ಮೋಡ್‌ನಲ್ಲಿಟ್ಟಿದ್ದರು. ಮೂವರು ಯುವತಿಯರು ಕೊಳಕ್ಕೆ ಇಳಿಯುತ್ತಾರೆ. ಒಬ್ಬಾಕೆ ಟ್ಯೂಬ್ ತೆಗೆದುಕೊಳ್ಳಲು ಸ್ವಲ್ಪ ಮುಂದಕ್ಕೆ ತೆರಳಿದ್ದು, ಈ ವೇಳೆ ನೀರಿನಲ್ಲಿ ದಿಢೀರ್ ಒದ್ದಾಡಿದ್ದಾಳೆ. ಈ ವೇಳೆ ರಕ್ಷಿಸಲು ಮತ್ತೊಬ್ಬಾಕೆ ಮುಂದೆ ಹೋಗಿ ಹಿಡಿಯುತ್ತಿದ್ದಂತೆ ಆಕೆಯೂ ನೀರಿನಿಂದ ಮೇಲೆ ಬರಲಾರದೇ ಒದ್ದಾಡಿದ್ದಾಳೆ. ಈ ವೇಳೆ ಮೂರನೇ ಯುವತಿ ಕೂಡ ಅವರಿಬ್ಬರ ರಕ್ಷಣೆಗೆ ತೆರಳಿದ್ದು ಆಕೆಯೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ಯುವತಿಯರು ಈಜುಕೊಳದಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ವಿಡಿಯೋ ರೆಸಾರ್ಟ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ರೆಸಾರ್ಟ್ ಸ್ಥಳೀಯರಾದ ಮನೋಹರ್ ಎಂಬವರಿಗೆ ಸೇರಿದ್ದಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಉಳ್ಳಾಲ ಪೊಲೀಸ್ ಇನ್ಸ್‌ಪೆಕ್ಟರ್ ಹೆಚ್. ಎನ್. ಬಾಲಕೃಷ್ಣ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತನಿಖೆ ನಡೆಯುತ್ತಿದೆ.
ರೆಸಾರ್ಟ್ಗೆ ಬೀಗಮುದ್ರೆ: ಘಟನೆಗೆ ಸಂಬಂಧಿಸಿದಂತೆ ಸೋಮೇಶ್ವರದ VAZCO ಬೀಚ್ ರೆಸಾರ್ಟ್ಗೆ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದಾರೆ. ಈ ರೆಸಾರ್ಟ್‌ನ ಟ್ರೇಡ್ ಲೈಸನ್ಸ್ ಮತ್ತು ಟೂರಿಸಂ ಪರವಾನಿಗೆಯನ್ನು ಅಮಾನತ್ತಿನಲ್ಲಿಡಲಾಗಿದೆ ಎಂದು ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ ತಿಳಿಸಿದ್ದಾರೆ.
ಪೊಲೀಸ್ ಆಯುಕ್ತರ ಪ್ರತಿಕ್ರಿಯೆ: ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಪ್ರತಿಕ್ರಿಯಿಸಿ, ''ಮೈಸೂರಿನ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಕೀರ್ತನಾ, ನಿಶಿತಾ, ಪಾರ್ವತಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈಜುಕೊಳಗಳನ್ನು ಹೊಂದಿರುವ ರೆಸಾರ್ಟ್‌ಗಳಲ್ಲಿ ಕೆಲವು ಸುರಕ್ಷತಾ ಷರತ್ತುಗಳನ್ನು ಅನುಸರಿಸಬೇಕಾಗುತ್ತದೆ. ಆದರೆ ಘಟನಾ ಸ್ಥಳವನ್ನು ಪರಿಶೀಲಿಸಿದ ನಂತರ ಪ್ರಾಥಮಿಕ ಮಾಹಿತಿಯ ಪ್ರಕಾರ, ಲೋಪಗಳಾಗಿವೆ ಎಂದು ತಿಳಿದುಬಂದಿದೆ. ರೆಸಾರ್ಟ್‌ನಲ್ಲಿ ಏಳು ಉದ್ಯೋಗಿಗಳು ಕರ್ತವ್ಯದಲ್ಲಿದ್ದರು. ಆದರೆ ಯಾರೂ ಅವರ ಸಹಾಯಕ್ಕೆ ಬಂದಿರುವುದಿಲ್ಲ. ಈ ಸಂದರ್ಭದಲ್ಲಿ ಸಿಬ್ಬಂದಿ ಇರಲಿಲ್ಲವೆ ಎಂಬುದನ್ನು ಪರಿಶೀಲಿಸಬೇಕಾಗಿದೆ" ಎಂದು ಹೇಳಿದರು.
ಇದನ್ನೂ ಓದಿ: ಕಾರಿಗೆ ಬೆಂಕಿ ತಗುಲಿ ವ್ಯಕ್ತಿ ಸಜೀವ ದಹನ ಪ್ರಕರಣಕ್ಕೆ ಟ್ವಿಸ್ಟ್: ಕೊಲೆಯಲ್ಲ, ಆತ್ಮಹತ್ಯೆ!