ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೂ ಮುನ್ನ ಆಮ್ ಆದ್ಮಿ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ. ದೆಹಲಿ ಸಾರಿಗೆ ಸಚಿವ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಕೈಲಾಶ್ ಗೆಹ್ಲೋಟ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕೈಲಾಶ್ ಗೆಹ್ಲೋಟ್ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಅತಿಶಿ ಅವರು ಅಂಗೀಕರಿಸಿದ್ದಾರೆ. ಗೆಹ್ಲೋಟ್ ಅವರು ರಾಜೀನಾಮೆ ಪತ್ರವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಅವರಿಗೂ ಕಳುಹಿಸಿದ್ದಾರೆ. ರಾಜೀನಾಮೆ ಪತ್ರದಲ್ಲಿ ಪಕ್ಷದ "ಆಂತರಿಕ ಸವಾಲುಗಳು" ಮತ್ತು "ಈಡೇರದ ಭರವಸೆಗಳ" ಬಗ್ಗೆ ಉಲ್ಲೇಖಿಸಿ, ಯಮುನಾ ನದಿಯನ್ನು ಸ್ವಚ್ಛಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಪತ್ರದಲ್ಲಿ "ಶೀಶ್ ಮಹಲ್ನಂತಹ ಹಲವು ವಿವಾದಗಳು, ಆಮ್ ಆದ್ಮಿ ಮೇಲೆ ನಂಬಿಕೆ ಇಡಬೇಕೇ ಎನ್ನುವ ಅನುಮಾನ ಹುಟ್ಟಿಸುತ್ತಿದೆ. ದೆಹಲಿ ಸರ್ಕಾರ ತನ್ನ ಬಹುಪಾಲು ಸಮಯವನ್ನು ಕೇಂದ್ರದೊಂದಿಗಿನ ವಿವಾದಗಳಲ್ಲೇ ಕಳೆಯುತ್ತಿದೆ. ಕೇಂದ್ರದ ಜೊತೆಗೆ ಆರೋಪ- ಪ್ರತ್ಯಾರೋಪಗಳಲ್ಲಿ ಸದಾ ಸಿಲುಕುತ್ತಲೇ ಇರುವುದರಿಂದ ದೆಹಲಿಯ ನಿಜವಾದ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುವುದು ಈಗ ಸ್ಪಷ್ಟವಾಗುತ್ತಿದೆ. ಸಾರ್ವಜನಿಕರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಪಕ್ಷಕ್ಕೆ ಆಸಕ್ತಿ ಇಲ್ಲ" ಎಂದು ಅವರು ಆರೋಪಿಸಿದರು.
"ಕೇಂದ್ರ ಸರ್ಕಾರದ ಜೊತೆ ಚರ್ಚೆ ಮಾಡುವುದರಲ್ಲಿಯೇ ಪಕ್ಷ ತನ್ನ ಸಮಯವನ್ನು ವ್ಯರ್ಥ ಮಾಡುತ್ತಿದೆ. ಕೇಂದ್ರ ಸರ್ಕಾರದ ಜೊತೆಗಿನ ಸಮನ್ವಯ ಕೊರತೆಯಿಂದ ಸಾರ್ವಜನಿಕ ಹಿತಾಸಕ್ತಿಯ ಕಾಮಗಾರಿಗಳು ನಡೆಯುತ್ತಿಲ್ಲ. ಸಾರ್ವಜನಿಕರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ" ಎಂದು ದೂರಿದರು.
"ಸಾರ್ವಜನಿಕರಿಗೆ ಭರವಸೆಗಳನ್ನು ನೀಡುತ್ತಿದ್ದರೂ ನಮ್ಮ ಸರ್ಕಾರ ಅವುಗಳನ್ನು ಈಡೇರಿಸಲು 10 ವರ್ಷಗಳಾದರೂ ಈ ನಿಟ್ಟಿನಲ್ಲಿ ಯಾವುದೇ ಅರ್ಥಪೂರ್ಣ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ದೆಹಲಿಯಲ್ಲಿ ಯಮುನೆಯ ಸ್ಥಿತಿ ಹದಗೆಟ್ಟಿದೆ. ಕಳೆದ ಹತ್ತು ವರ್ಷಗಳಲ್ಲಿ ಮಾಲಿನ್ಯ ಕಡಿಮೆಯಾಗುವ ಬದಲು ಹೆಚ್ಚುತ್ತಲೇ ಇದೆ. ಸಾರ್ವಜನಿಕರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು 5 ವರ್ಷಗಳಲ್ಲಿ ಯಮುನಾ ನದಿ ಸ್ವಚ್ಛವಾಗುತ್ತದೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದ್ದರು. ಆದರೆ ಇದನ್ನು ಮಾಡಲು ಸಾಧ್ಯವಾಗಲಿಲ್ಲ. ನಮ್ಮ ಸರ್ಕಾರ ವಿಫಲವಾಗಿದೆ" ಎಂದು ಹೇಳಿದರು.
ಪತ್ರದಲ್ಲಿ ಮುಖ್ಯಮಂತ್ರಿಯವರ ನಿವಾಸ ಶೀಶ್ ಮಹಲ್ ನವೀಕರಣದ ಹೆಸರಿನಲ್ಲಿ ದುಂದು ವೆಚ್ಚಕ್ಕೆ ತಮ್ಮ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ. "ಸರ್ಕಾರ ರಚಿಸುವಾಗ ನಾವು ಸಾರ್ವಜನಿಕರಿಗೆ ಸರಳತೆಯ ಭರವಸೆ ನೀಡಿದ್ದೆವು, ಆದರೆ ನಾವು ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಪಕ್ಷದ ನಡತೆ, ಸ್ವಭಾವ ಬದಲಾಗಿದೆ. ಸಾರ್ವಜನಿಕರು ದುಡಿದ ಕೋಟಿಗಟ್ಟಲೆ ಹಣವನ್ನು ಶೀಶ್ ಮಹಲ್‌ಗೆ ಖರ್ಚು ಮಾಡಲಾಗಿದೆ. ಈ ರೀತಿ ಸಾರ್ವಜನಿಕ ಹಣ ದುರುಪಯೋಗ ಮಾಡುವುದು ಸರಿಯಲ್ಲ" ಎಂದರು.
"ನಾನು ದೆಹಲಿಯ ಜನರಿಗೆ ಸೇವೆ ಸಲ್ಲಿಸುವ ಬದ್ಧತೆಯೊಂದಿಗೆ ನನ್ನ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದವನು. ಮತ್ತು ನಾನು ಅದನ್ನು ಮುಂದುವರಿಸಲು ಬಯಸುತ್ತೇನೆ. ಹಾಗಾಗಿ ಪಕ್ಷದಿಂದ ಹೊರಬರುವುದು ಬಿಟ್ಟು ನನಗೆ ಬೇರೆ ದಾರಿ ಇಲ್ಲ ಎಂದೆನಿಸಿ, ಆಮ್ ಆದ್ಮಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಆದ್ಮಿ ಪಕ್ಷ ಹಾಗೂ ನಿಮ್ಮ ಆರೋಗ್ಯ ಮತ್ತು ಭವಿಷ್ಯಕ್ಕಾಗಿ ನಾನು ಶುಭ ಹಾರೈಸುತ್ತೇನೆ" ಎಂದು ಪತ್ರದಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಮತ್ತೆ ಸವಾಲು