ಬೆಂಗಳೂರು: ಆರೋಪ ಹೊತ್ತವರು ನಿರೀಕ್ಷಣಾ ಜಾಮೀನು ಕೋರಿ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಹೈಕೋರ್ಟ್ ಮೊರೆ ಹೋಗಬೇಕೇ ವಿನಃ, ಇನ್ನುಳಿದಂತೆ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದು ಉತ್ತಮ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಶಾಲಾ ಶಿಕ್ಷಕ ಎಚ್.ಇಮ್ರಾನ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಏಕಸದಸ್ಯ ಪೀಠ ಈ ಅಭಿಪ್ರಾಯಪಟ್ಟಿದೆ. ಜಾಮೀನು ಅರ್ಜಿಯನ್ನು ಪರಿಗಣಿಸುವಲ್ಲಿ ಮತ್ತು ನಿರ್ಧರಿಸುವಲ್ಲಿ ಸೆಷನ್ಸ್ ನ್ಯಾಯಾಲಯ ಮತ್ತು ಹೈಕೋರ್ಟ್ ಒಂದೇ ರೀತಿಯ ಅಧಿಕಾರವಿದ್ದರೂ, ಅರ್ಜಿದಾರರು ಅಸಾಧಾರಣ ಸಂದರ್ಭಗಳಿದ್ದಲ್ಲಿ ಮಾತ್ರ ನೇರವಾಗಿ ಹೈಕೋರ್ಟ್‌ಗೆ ಸಲ್ಲಿಸಬಹುದು. ಇಲ್ಲದಿದ್ದರೆ ಪ್ರಾರಂಭದಲ್ಲಿ ಮೊದಲಿಗೆ ಸೆಷನ್ಸ್ ನ್ಯಾಯಾಲಯವನ್ನು ಸಂಪರ್ಕಿಸುವುದು ಉತ್ತಮ ಎಂದು ಪೀಠ ಹೇಳಿದೆ.
ಅಲ್ಲದೆ, ತಕ್ಷಣದ ಅರ್ಜಿಯನ್ನು ಪರಿಗಣಿಸಲು ಯಾವುದೇ ಸೂಕ್ತ ಕಾರಣಗಳಿಲ್ಲ. ಸೆಷನ್ಸ್ ನ್ಯಾಯಾಲಯವು ಪ್ರತಿಕೂಲ ಆದೇಶ ಹೊರಡಿಸಿದರೆ, ಅರ್ಜಿದಾರರು ಅದೇ ಪರಿಹಾರಕ್ಕಾಗಿ ಹೈಕೋರ್ಟ್ ಮುಂದೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿತು.
ಪ್ರಕರಣದ ಹನ್ನೆಲೆ: ಅರ್ಜಿದಾರ ಆರೋಪಿಯು ಮದುವೆಯ ಭರವಸೆ ನೀಡಿ ದೂರುದಾರ ಮಹಿಳೆಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ್ದಾನೆ ಮತ್ತು ನಂತರ ಅವರಿಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ದೂರು ದಾಖಲಾಗಿತ್ತು. ದೂರಿಗೆ ಸಂಬಂಧಿಸಿದಂತೆ ಬಂಧನ ಭೀತಿಯಲ್ಲಿದ್ದ ಅರ್ಜಿದಾರ ನಿರೀಕ್ಷಣಾ ಜಾಮೀನು ಕೋರಿ ನೇರವಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲು ಸೆಷನ್ಸ್ ನ್ಯಾಯಾಲಯ ಮತ್ತು ಹೈಕೋರ್ಟ್ ಎರಡೂ ಸಮಾನ ಅಧಿಕಾರ ವ್ಯಾಪ್ತಿ ಹೊಂದಿವೆ. ಆದ್ದರಿಂದ, ಅರ್ಜಿದಾರರು ನೇರವಾಗಿ ಈ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ ಎಂದು ವಾದಿಸಿದ್ದರು.
2014ರ ಡಿಸೆಂಬರ್ 5 ರಂದು ದಾವಣಗೆರೆಯ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿಗೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧ ಮಾಡಲಾಗಿರುವ ಆರೋಪಗಳು ಸುಳ್ಳು, ಸೃಷ್ಟಿಸಲ್ಪಟ್ಟಿವೆ ಮತ್ತು ಅರ್ಜಿದಾರರಿಗೆ ಬೆದರಿಕೆ ಇದೆ ಎಂದು ಪೀಠಕ್ಕೆ ವಿವರಿಸಿದ್ದರು.
ಇದನ್ನೂ ಓದಿ: ದಿವಾಳಿ ಪ್ರಕ್ರಿಯೆಯಲ್ಲಿ ವಶಪಡಿಸಿಕೊಂಡ ಸಾಲ ಪತ್ರಗಳ ವಿವರ ಕೇಳಿ ಹೈಕೋರ್ಟ್ ಮೊರೆಹೋದ ವಿಜಯ್ ಮಲ್ಯ