ಕಾರ್ತಿಕ ಮಾಸದ ಪ್ರಯುಕ್ತ ಚಾಮುಂಡಿಬೆಟ್ಟದ ಬೃಹತ್ ನಂದಿಗೆ ಮಹಾಭಿಷೇಕ: ವಿಡಿಯೋ - MAHABHISHEKA
🎬 Watch Now: Feature Video
Published : Nov 17, 2024, 4:11 PM IST
ಮೈಸೂರು: ಕಾರ್ತಿಕ ಮಾಸದ ಪ್ರಯುಕ್ತ ಚಾಮುಂಡಿಬೆಟ್ಟದಲ್ಲಿನ ನಂದಿ ವಿಗ್ರಹಕ್ಕೆ ವಿಜೃಂಭಣೆಯಿಂದ ಮಹಾಭಿಷೇಕ ಭಾನುವಾರ ಜರುಗಿತು. ಮೈಸೂರಿನ ಬೆಟ್ಟದ ಬಳಗ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಕೂಡ ಮಹಾಭಿಷೇಕ ಹಾಗೂ ಪೂಜಾ ಮಹೋತ್ಸವ ನಡೆಸಲಾಗಿದ್ದು, 19ನೇ ವರ್ಷದ ಮಹಾಭಿಷೇಕ ಕಾರ್ಯಕ್ರಮ ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಮಹಾಭಿಷೇಕ ಕಾರ್ಯಕ್ರಮದ ಪ್ರಯುಕ್ತ ನಂದಿ ವಿಗ್ರಹಕ್ಕೆ ಮುಂಜಾನೆಯಿಂದಲೇ ವಿವಿಧ ಪೂಜೆ ಸಲ್ಲಿಸಲಾಯಿತು. ಬಳಿಕ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಶಾಖ ಮಠದ ಸೋಮೇಶ್ವರನಾಥ ಸ್ವಾಮೀಜಿ ಹಾಗೂ ಹೊಸಮಠದ ಚಿದಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ಮಹಾಭಿಷೇಕ ನಡೆಯಿತು.
ಬೃಹತ್ ನಂದಿ ವಿಗ್ರಹಕ್ಕೆ ಕನಕಾಭಿಷೇಕ, ರುದ್ರಾಭಿಷೇಕ, ಕ್ಷೀರಾಭಿಷೇಕ, ಗಂಧಾಭಿಷೇಕ, ಕುಂಕುಮಾಭಿಷೇಕ, ಅರಿಶಿನ ಅಭಿಷೇಕ ಸೇರಿದಂತೆ ವಿವಿಧ ಬಗೆಯ ಹಣ್ಣು, ಹಾಲು, ಚಂದನ, ಶ್ರೀಗಂಧ, ಬಿಲ್ವಪತ್ರೆ, ಖರ್ಜೂರ, ಕೊಬ್ಬರಿ ಅಭಿಷೇಕ ನೆರವೇರಿಸಲಾಯಿತು. ಕೊನೆಯಲ್ಲಿ ಜಲಾಭಿಷೇಕದೊಡನೆ ಮಹಾಭಿಷೇಕವನ್ನು ಸಮಾಪ್ತಿಗೊಳಿಸಲಾಯಿತು. ಈ ವೇಳೆ ನೂರಾರು ಮಂದಿ ಭಕ್ತರು ಇದ್ದರು.
ದೇಶದ ಮೂರನೇ ಅತಿದೊಡ್ಡ ನಂದಿ ವಿಗ್ರಹವನ್ನು 17ನೇ ಶತಮಾನದಲ್ಲಿ ಮೈಸೂರು ದೊರೆ ದೊಡ್ಡ ದೇವರಾಜ ಒಡೆಯರ್ ಪ್ರತಿಷ್ಠಾಪಿಸಿದ್ದರು ಎಂದು ನಂಬಲಾಗಿದೆ.
ಇದನ್ನೂ ಓದಿ: ನ.25, 26ರಂದು ಬಸವನಗುಡಿ ಕಡಲೆಕಾಯಿ ಪರಿಷೆ: ವ್ಯಾಪಾರಸ್ಥರಿಗೆ ಸುಂಕ ವಿನಾಯಿತಿ