ವಿಜಯಪುರ:ತನ್ನ ಬ್ಯಾಂಕ್ ಖಾತೆಯಿಂದ 2 ಲಕ್ಷ 20 ಸಾವಿರ ರೂ. ಡ್ರಾ ಮಾಡಿಕೊಂಡು ಹೋಗುತ್ತಿದ್ದ ವ್ಯಕ್ತಿಯ ಗಮನ ಬೇರೆಡೆ ಸೆಳೆದು ಹಣ ಕಿತ್ತುಕೊಂಡು ಪರಾರಿಯಾದ ಘಟನೆ ತಾಳಿಕೋಟೆ ಪಟ್ಟಣದಲ್ಲಿ ಗುರುವಾರ ನಡೆದಿದೆ.
ಪಟ್ಟಣದ ನಾಗಪ್ಪ ಅಮ್ರಪ್ಪ ಕೇಂಭಾವಿ (61) ಎಂಬವರು ಹಣ ಕಳೆದುಕೊಂಡಿದ್ದಾರೆ. ಇವರು ವ್ಯವಹಾರಕ್ಕಾಗಿ ಪಟ್ಟಣದ ಬ್ಯಾಂಕ್‌ನಲ್ಲಿ ಎಸ್.ಬಿ. ಖಾತೆ ತೆಗೆದು ವ್ಯವಹಾರ ಮಾಡುತ್ತಿದ್ದರಂತೆ. ಗುರುವಾರ ಬೆಳಿಗ್ಗೆ 11:40ರ ಸುಮಾರಿಗೆ ಬ್ಯಾಂಕಿಗೆ ತೆರಳಿ ಅವಶ್ಯವಿದ್ದ 2 ಲಕ್ಷ 20 ಸಾವಿರ ರೂ. ನಗದನ್ನು ಚೆಕ್ ಮೂಲಕ ಡ್ರಾ ಮಾಡಿದ್ದಾರೆ. ಬಳಿಕ ಮನೆಗೆ ಹೋಗಲು ಬೈಕ್ ಹತ್ತಿ ಹಣವನ್ನು ಬೈಕ್ ಟ್ಯಾಂಕ್ ಕವರ್‌ನಲ್ಲಿಟ್ಟು ಕಿಕ್ ಹೊಡೆಯುತ್ತಿದ್ದರು.
ಈ ವೇಳೆ ಹಣ ದೋಚಲು ಹೊಂಚು ಹಾಕಿ ಕುಳಿತಿದ್ದ ಇಬ್ಬರು ಬಂದು ಬಸ್ಟ್ಯಾಂಡ್‌ಗೆ ದಾರಿ ಯಾವ ಕಡೆ ಎಂದು ಹಿಂಬದಿಯಿಂದ ಕೇಳಿದಂತೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕೈ ಮಾಡಿ ದಾರಿ ತೋರಿಸುವಷ್ಟರಲ್ಲಿ ಮತ್ತೊಬ್ಬ ಟ್ಯಾಂಕಿನಲ್ಲಿದ್ದ ಹಣ ಕಿತ್ತುಕೊಂಡು ತನ್ನ ಬೈಕ್ ಹತ್ತಿ ಪಟ್ಟಣದ ಬಸವೇಶ್ವರ ವೃತ್ತದ ಕಡೆ ಪರಾರಿಯಾಗಿದ್ದಾನೆ.
ಹಣ ಕಳೆದುಕೊಂಡ ವ್ಯಕ್ತಿ ಬೆನ್ನಟ್ಟಿ ಹೋದರೂ ಕಾಣಿಸಲಿಲ್ಲ. ಹಣ ಕಿತ್ತುಕೊಂಡ ಖದೀಮರ ವಯಸ್ಸು ಅಂದಾಜು 30ರಿಂದ 35 ಇರಬಹುದು ಎಂದು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಆರೋಪಿಗಳಿಗೆ ಶೋಧ ಚುರುಕುಗೊಳಿಸಲಾಗಿದೆ.
ಇದನ್ನೂ ಓದಿ:ದೊಡ್ಡಬಳ್ಳಾಪುರ: ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ; ಕೊಲೆ ಆರೋಪಿಗೆ ಗುಂಡೇಟು - Police Opened Fire